ಕೋಲ್ಕತ್ತ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ 4ನೇ ತರಗತಿ ಓದುತ್ತಿದ್ದ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ 19 ವರ್ಷದ ವ್ಯಕ್ತಿಗೆ ವಿಶೇಷ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಕೃತ್ಯ ನಡೆದ ಎರಡೇ ತಿಂಗಳ ಒಳಗಾಗಿ ಶಿಕ್ಷೆ ಪ್ರಕಟಗೊಂಡಿದೆ.
ಪೋಕ್ಸೊ ಅಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುಬ್ರತಾ ಚಟ್ಟೋಪಾಧ್ಯಾಯ ಅವರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಾಯ್ದೆಯ 65 (ಅತ್ಯಾಚಾರ), 66 (ಸಾವಿಗೆ ಕಾರಣವಾಗುವ ಕೃತ್ಯ), 103 (ಕೊಲೆ) ಹಾಗೂ ಪೋಕ್ಸೊ ಕಾಯ್ದೆಯಡಿ ಆರೋಪಿ ನಡೆಸಿದ ಕೃತ್ಯ ಸಾಭೀತಾಗಿದೆ ಎಂದು ಅಭಿಪ್ರಾಯಪಟ್ಟು ಮರಣದಂಡನೆ ಶಿಕ್ಷೆ ಪ್ರಕಟಿಸಿದರು. ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯೊಬ್ಬರ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ವ್ಯಾಪಕ ಮುಷ್ಕರ ನಡೆಯುತ್ತಿದ್ದ ಸಂದರ್ಭದಲ್ಲೇ ಈ ಘಟನೆಯೂ ನಡೆದಿತ್ತು.
ನ್ಯಾಯಾಲಯದ ಆದೇಶ ಕುರಿತು ಪ್ರತಿಕ್ರಿಯಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿಭಾಸ್ ಚಟರ್ಜಿ, 'ತನಿಖೆ ಹಾಗೂ ವಿಚಾರಣೆ ತ್ವರಿತಗತಿಯಲ್ಲಿ ಸಾಗಿದ್ದನ್ನು ಗಮನಿಸಿದರೆ. ದೇಶದ ಅಪರಾಧ ನ್ಯಾಯಶಾಸ್ತ್ರದಲ್ಲೇ ಇದೊಂದು ವಿಶೇಷವಾದ ಪ್ರಕರಣವಾಗಿದೆ' ಎಂದರು.
ಪ್ರಕರಣದ ತೀರ್ಪು ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ರಾಜ್ಯದ ಇತಿಹಾಸದಲ್ಲೇ ಕೃತ್ಯ ನಡೆದ 2 ತಿಂಗಳ ಒಳಗಾಗಿ ಅಪರಾಧಿಗೆ ಶಿಕ್ಷೆ ಪ್ರಕಟವಾಗಿದ್ದು ಇದೇ ಮೊದಲು. ರಾಜ್ಯ ಪೊಲೀಸರ ಶ್ರಮ ಹಾಗೂ ಈ ನ್ಯಾಯದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ರಾಜ್ಯ ಸರ್ಕಾರ ಸದಾ ಶೂನ್ಯ ಸಹಿಷ್ಣುತೆ ಹೊಂದಿದೆ. ಈ ಪ್ರಕರಣದಿಂದಾಗಿ ನ್ಯಾಯ ಎಂಬುದು ವಿಳಂಬವೂ ಆಗದು ನಿರಾಕರಣೆಯೂ ಆಗದು' ಎಂದಿದ್ದಾರೆ.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಪ್ರತಿಕ್ರಿಯಿಸಿ, 'ಅಪರಾಜಿತಾ ಅತ್ಯಾಚಾರ ವಿರೋಧಿ ಮಸೂದೆಯನ್ನು ರಾಷ್ಟ್ರವ್ಯಾಪಿ ಅನುಷ್ಠಾನಗೊಳಿಸುವ ದೊಡ್ಡ ಕೆಲಸವಿದ್ದು, ಆ ಮೂಲಕ ಇಂಥ ದುಷ್ಕೃತ್ಯದ ವಿರುದ್ಧ ಪ್ರತಿಬಂಧಕವನ್ನು ವಿಧಿಸುವ ಏಕೈಕ ಮಾರ್ಗವಾಗಿದೆ' ಎಂದಿದ್ದಾರೆ.