ಢಾಕಾ: ಬಾಂಗ್ಲಾದೇಶದ ಉದಯಕ್ಕೆ ಕಾರಣವಾಗಿದ್ದ 1971 ರ ಯುದ್ಧ ಹಾಗೂ ಯುದ್ಧದದಲ್ಲಿ ಭಾರತ ಮಹತ್ವದ ಪಾತ್ರ ವಹಿಸಿದ ಇತಿಹಾಸವನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಕಡೆಗಣಿಸಿದೆ.
1971 ರ ಡಿ.16 ರಂದು ಪಾಕ್ ಸೇನೆ ಭಾರತೀಯ ಸೇನೆ ಎದುರು ಮಂಡಿಯೂರಿತ್ತು ಪರಿಣಾಮ ಬಾಂಗ್ಲಾದೇಶ ಉದಯವಾಗಿತ್ತು. ಈ ದಿನವನ್ನು ಭಾರತ ವಿಜಯ ದಿವಸ್ ನ್ನಾಗಿ ಪರಿಗಣಿಸುತ್ತದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದನ್ನು ಬಾಂಗ್ಲಾ ಮಧ್ಯಂತರ ಸರ್ಕಾರದ ಕಾನೂನು ಸಲಹೆಗಾರ ಆಸೀಫ್ ನಜ್ರುಲ್ ಖಂಡಿಸಿದ್ದಾರೆ.
ಬಾಂಗ್ಲಾ ವಿಮೋಚನೆಗೆ ಭಾರತದ ಕೊಡುಗೆಯನ್ನೇ ಪ್ರಶ್ನಿಸುವಂತಹ ಮಾತುಗಳನ್ನಾಡಿರುವ ಆಸೀಫ್ ನಜ್ರುಲ್, ಈ ಗೆಲುವಿನಲ್ಲಿ ಭಾರತವು ಕೇವಲ ಮಿತ್ರರಾಷ್ಟ್ರವಾಗಿತ್ತು, ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಅವರು ಹೇಳಿದ್ದಾರೆ.
1971ರ ಐತಿಹಾಸಿಕ ವಿಜಯದಲ್ಲಿ ಭಾರತೀಯ ಸೈನಿಕರ ಪಾತ್ರಕ್ಕಾಗಿ ಗೌರವ ಸಲ್ಲಿಸಿದ ಮೋದಿ ಅವರ ಎಕ್ಸ್ ಪೋಸ್ಟ್‌ನ ಸ್ಕ್ರೀನ್‌ಶಾಟ್ ನ್ನು ಲಗತ್ತಿಸಿರುವ ನಜ್ರುಲ್, ಇದನ್ನು 'ನಾನು ಬಲವಾಗಿ ಪ್ರತಿಭಟಿಸುತ್ತೇನೆ. ಡಿಸೆಂಬರ್ 16, 1971, ಬಾಂಗ್ಲಾದೇಶದ ವಿಜಯ ದಿನವನ್ನು ಸೂಚಿಸುತ್ತದೆ. ಈ ಗೆಲುವಿನಲ್ಲಿ ಭಾರತವು ಕೇವಲ ಮಿತ್ರರಾಷ್ಟ್ರವಾಗಿತ್ತು, ಹೆಚ್ಚೇನೂ ಇಲ್ಲ, ಎಂದು ಬಂಗಾಳಿ ಭಾಷೆಯಲ್ಲಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
'ಇಂದು, ವಿಜಯ್ ದಿವಸ್‌ನಲ್ಲಿ, 1971 ರಲ್ಲಿ ಭಾರತದ ಐತಿಹಾಸಿಕ ವಿಜಯಕ್ಕೆ ಕಾರಣರಾದ ವೀರ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು ನಾವು ಗೌರವಿಸುತ್ತೇವೆ. ಅವರ ನಿಸ್ವಾರ್ಥ ಸಮರ್ಪಣೆ ಮತ್ತು ಅಚಲ ಸಂಕಲ್ಪ ನಮ್ಮ ರಾಷ್ಟ್ರವನ್ನು ರಕ್ಷಿಸಿದೆ ಮತ್ತು ನಮಗೆ ಕೀರ್ತಿ ತಂದಿದೆ.
'ಈ ದಿನ ಅವರ ಅಸಾಧಾರಣ ಶೌರ್ಯ ಮತ್ತು ಅವರ ಅಚಲ ಮನೋಭಾವಕ್ಕೆ ಗೌರವವಾಗಿದೆ. ಅವರ ತ್ಯಾಗಗಳು ಪೀಳಿಗೆಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತವೆ ಮತ್ತು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಆಳವಾಗಿ ಹುದುಗಿದೆ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಜ್ರುಲ್ ಹೊರತುಪಡಿಸಿ, ಮಧ್ಯಂತರ ಸರ್ಕಾರದಲ್ಲಿ ಹಲವಾರು ಮಂದಿ ಭಾರತದ ಪೋಸ್ಟ್ ಗೆ ವಿರೋಧಿಸುವ ಭಾವನೆಯನ್ನು ಹಂಚಿಕೊಂಡಿದ್ದಾರೆ.
ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ಪತ್ರಿಕಾ ಕಾರ್ಯದರ್ಶಿ ಶಫೀಕುಲ್ ಆಲಂ ಅವರು ನಜ್ರುಲ್ ಅವರ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ. ಇದೇ ವೇಳೆ, ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ ಸಂಚಾಲಕ ಹಸ್ನತ್ ಅಬ್ದುಲ್ಲಾ ಕೂಡ ಮೋದಿ ಅವರ ಪೋಸ್ಟ್ ನ್ನು ಟೀಕಿಸಿದ್ದಾರೆ.
'ಇದು ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಬಾಂಗ್ಲಾದೇಶದ ವಿಮೋಚನಾ ಯುದ್ಧವಾಗಿತ್ತು. ಆದರೆ ಮೋದಿ ಅವರು ತಮ್ಮ ಬರಹದಲ್ಲಿ ಬಾಂಗ್ಲಾದೇಶದ ಅಸ್ತಿತ್ವವನ್ನು ಕಡೆಗಣಿಸಿ ಇದು ಕೇವಲ ಭಾರತದ ಯುದ್ಧ ಮತ್ತು ಅವರ ಸಾಧನೆ ಎಂದು ಹೇಳಿದ್ದಾರೆ. 'ಭಾರತ ಈ ಸ್ವಾತಂತ್ರ್ಯವನ್ನು ತಮ್ಮ ಸಾಧನೆ ಎಂದು ಹೇಳಿಕೊಂಡಾಗ, ಇದು ನಮ್ಮ ಸ್ವಾತಂತ್ರ್ಯ, ಸಾರ್ವಭೌಮತ್ವ ಮತ್ತು ಏಕತೆಗೆ ಬೆದರಿಕೆ ಹಾಕುವುದಾಗಿದೆ ಎಂದು ನಾನು ಭಾವಿಸುತ್ತೇನೆ. ಭಾರತದ ಈ ಬೆದರಿಕೆಯ ವಿರುದ್ಧ ನಾವು ಹೋರಾಡುವುದು ಅವಶ್ಯಕವಾಗಿದೆ. ಈ ಹೋರಾಟವನ್ನು ನಾವು ಮುಂದುವರಿಸಬೇಕಾಗಿದೆ' ಎಂದು ಅವರು ಹೇಳಿದ್ದಾರೆ.
ಮುಖ್ಯ ಸಲಹೆಗಾರ ಯೂನಸ್ ಅವರು ಸೋಮವಾರ ಬಾಂಗ್ಲಾದೇಶದ 54 ನೇ ವಿಜಯ ದಿನಾಚರಣೆಯ ನೇತೃತ್ವ ವಹಿಸಿದ್ದರು, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತವನ್ನು 'ವಿಶ್ವದ ಅತ್ಯಂತ ಕೆಟ್ಟ ನಿರಂಕುಶ ಸರ್ಕಾರ' ಎಂದು ಕರೆದ ಸಂದರ್ಭದಲ್ಲಿ ಸಂಸ್ಥಾಪಕ ನಾಯಕ ಮುಜಿಬುರ್ ರೆಹಮಾನ್ ಅವರನ್ನು ಭಾಷಣದಲ್ಲಿ ಉಲ್ಲೇಖಿಸಲಿಲ್ಲ ಎಂಬುದು ಗಮನಾರ್ಹವಾಗಿದೆ.