ನವದೆಹಲಿ: ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಕೆಂಪು ಬಣ್ಣದಲ್ಲಿ '1984' ಎಂದು ಬರೆದ ಕೈಚೀಲವನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಶುಕ್ರವಾರ ಉಡುಗೊರೆಯಾಗಿ ನೀಡಿದ್ದಾರೆ.
ಪ್ಯಾಲೆಸ್ಟೀನ್ ಜನರು ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪರ ಬರಹ ಇದ್ದ ಕೈಚೀಲವನ್ನು ಹಿಡಿದುಕೊಂಡು ಪ್ರಿಯಾಂಕಾ ಅವರು ಸಂಸತ್ತಿಗೆ ಬಂದ ಕೆಲ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಭುನವೇಶ್ವರ ಕ್ಷೇತ್ರದ ಸಂಸದೆ ಸಾರಂಗಿ ಅವರು ಸಂಸತ್ ಕಟ್ಟಡದ ಮೊಗಸಾಲೆಯಲ್ಲಿ ಪ್ರಿಯಾಂಕಾ ಅವರಿಗೆ ಈ ಕೈಚೀಲ ನೀಡಿದ್ದಾರೆ. ಸಾರಂಗಿ ಅವರಿಂದ ಕೈಚೀಲ ಪಡೆದ ಪ್ರಿಯಾಂಕಾ ಮರು ಮಾತನಾಡದೆ ಅಲ್ಲಿಂದ ತೆರಳಿದ್ದಾರೆ.
'ಕೈಚೀಲದಲ್ಲಿ '1984ರ ಗಲಭೆ' ಎಂದು ಬರೆಯಲಾಗಿದೆ. ಪ್ರಿಯಾಂಕಾ ಅವರು ಕೈಚೀಲದಲ್ಲಿ ಬರಹಗಳ ಮೂಲಕ ವಿವಿಧ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇದು ಕೂಡಾ ಅವರು ಪ್ರಸ್ತಾಪಿಸಬೇಕಾದ ವಿಷಯ' ಎಂದು ಸಾರಂಗಿ ಹೇಳಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧದಲ್ಲಿ ಪ್ಯಾಲೆಸ್ಟೀನ್ ಜನರ ಪರ ಬೆಂಬಲ ಸೂಚಿಸಲು ಪ್ರಿಯಾಂಕಾ ಅವರು ಸೋಮವಾರ 'ಪ್ಯಾಲೆಸ್ಟೀನ್' ಎಂದು ಬರೆದಿದ್ದ ಕೈಚೀಲದೊಂದಿಗೆ ಸಂಸತ್ತಿಗೆ ಬಂದಿದ್ದರು.
ಅದರ ಮರುದಿನ ಅವರು 'ಬಾಂಗ್ಲಾದೇಶ್ ಕೆ ಹಿಂದೂ ಔರ್ ಈಸಾಯಿಯೋಂಕೆ ಸಾಥ್ ಖಢೆ ಹೊ' (ಬಾಂಗ್ಲಾದೇಶದ ಹಿಂದೂಗಳು ಮತ್ತು ಕ್ರೈಸ್ತರ ಪರವಾಗಿ ನಿಲ್ಲಿ) ಎಂಬ ಬರಹ ಇದ್ದ ಕೈಚೀಲ ಹಿಡಿದುಕೊಂಡಿದ್ದರು.