ಕಾಸರಗೋಡು: ಪತ್ನಿ ಹಾಗೂ ಮೂರು ಮಂದಿ ಮಕ್ಕಳಿರುವ ಪುರುಷನ ಜತೆ 19ರ ಹರೆಯದ ಯುವತಿ ಪರಾರಿಯಾಗಿದ್ದು, ಯುವತಿ ಪೋಷಕರು ಹಾಗೂ ಪುರುಷನ ಮನೆಯವರ ಸಮ್ಮತಿಯೊಂದಿಗೆ ಕೊನೆಗೂ ಯುವತಿ ತೆರಳುವ ಮೂಲಕ ನಾಟಕೀಯ ಅಂತ್ಯ ಕಂಡಿದೆ.
ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಟೆಕಲ್ಲಿನಲ್ಲಿ ಘಟನೆ. ಇಲ್ಲಿನ ನಿವಾಸಿಯಾಗಿರುವ ಯುವಕ ಹಾಗೂ ನರ್ಸಿಂಗ್ ಟ್ರೈನಿಯಾಗಿರುವ ಯುವತಿ ಎರಡು ದಿವಸಗಳ ಹಿಂದೆ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಯುವತಿಯನ್ನು ಹುಡುಕಾಡುವ ಮಧ್ಯೆ ಆಕೆ ಯುವಕನ ಸಂಬಂಧಿಕರ ಮನೆಯಲ್ಲಿರುವುದಾಗಿ ಮಾಹಿತಿ ಲಭಿಸಿತ್ತು. ಅಲ್ಲಿಗೆ ತೆರಳಿದ ಪೊಲೀಸರು ಜೋಡಿಯನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ತಾನು ಪ್ರಿಯತಮನೊಂದಿಗೆ ತೆರಳುವುದಾಗಿ ತಿಳಿಸಿದ್ದಾಳೆ. ಯುವತಿ ಪೊಲೀಸರಲ್ಲೂ ಇದೇ ಹೇಳಿಕೆ ನೀಡಿದ್ದು, ಅವರ ಸಂಪ್ರದಾಯ ಪ್ರಕಾರ ಒಂದಕ್ಕಿಂತ ಹೆಚ್ಚಿನ ವಿವಾಹ ನಡೆಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದೂ ತಿಳಿಸಿದ್ದಳು. ನಂತರ ಪೊಲೀಸರು ಹೆತ್ತವರನ್ನು ಠಾಣೆಗೆ ಕರೆಸಿ ಅವರಿಂದ ಮಾಹಿತಿ ಕೇಳಿದಾಗ ಪ್ರಿಯತಮನ ಜತೆ ತೆರಳುವುದಾದಲ್ಲಿ ತಮ್ಮ ವಿರೋಧವಿಲ್ಲ ಎಂದು ತಿಳಿಸಿದ್ದಾರೆನ್ನಲಾಗಿದೆ. ಯುವಕನ ಅಭಿಪ್ರಾಯ ಕೇಳಿದಾಗ ತಾನು ಈಗಾಗಲೇ ವಿವಾಹಿತನಾಗಿ ಮಕ್ಕಳಿದ್ದು, ಪತ್ನಿಯ ಸಮ್ಮತಿಯೊಂದಿಗೇ ಯುವತಿಯನ್ನು ಮದುವೆಯಾಗಿ ಮನೆಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದಾನೆ. ಒಟ್ಟಿನಲ್ಲಿ ಯುವತಿ ಪರಾರಿಯಾಗಿರುವ ಪ್ರಕರಣ ಕೊನೆಗೂ ನಾಟಕೀಯ ಅಂತ್ಯ ಕಂಡಿದೆ.