ಬದಾಯಿ: ಐದು ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧ ಸಾಬೀತಾಗಿದ್ದರಿಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಹಾಗೂ ₹1.01 ಲಕ್ಷ ದಂಡವನ್ನು ಉತ್ತರ ಪ್ರದೇಶದ ಬದಾಯಿಯಲ್ಲಿರುವ ಪೋಕ್ಸೊ ನ್ಯಾಯಾಲಯ ವಿಧಿಸಿ ಆದೇಶಿಸಿದೆ.
'ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ದೀಪಕ್ ಯಾದವ್ ಆದೇಶ ಪ್ರಕಟಿಸಿದ್ದು, ದಂಡದ ಮೊತ್ತವನ್ನು ಬಾಲಕನ ವೈದ್ಯಕೀಯ ವೆಚ್ಚ ಹಾಗೂ ಆರೈಕೆಗೆ ಬಳಸಬೇಕು ಎಂದಿದ್ದಾರೆ' ಎಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರದೀಪ್ ಭಾರ್ತಿ ತಿಳಿಸಿದ್ದಾರೆ.
'ಮೇ 23ರಂದು ಈ ಘಟನೆ ನಡೆದಿದೆ. ಮನೆ ಎದುರು ಆಡುತ್ತಿದ್ದ ಬಾಲಕನನ್ನು ಪುಸಲಾಯಿಸಿ ಅಪರಾಧಿ ರಮಾಕಾಂತ್ ಕರೆದೊಯ್ದಿದ್ದಾನೆ. ಗ್ರಾಮದ ಹೊರವಲಯದಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಕೃತ್ಯ ಎಸಗಿ, ನಂತರ ಬಾಲಕನನ್ನು ಮನೆ ಬಳಿಯೇ ಬಿಟ್ಟು ಪರಾರಿಯಾಗಿದ್ದಾನೆ' ಎಂದು ವಕೀಲರು ತಿಳಿಸಿದ್ದಾರೆ.
'ನಡೆದ ಘಟನೆಯನ್ನು ಬಾಲಕ ತನ್ನ ತಾಯಿಗೆ ವಿವರಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಪೋಕ್ಸೊ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದ್ದರು' ಎಂದು ವಿವರಿಸಿದ್ದಾರೆ.
'ಸಾಕ್ಷಾಧಾರಗಳನ್ನು ಪರಿಶೀಲಿಸಿದ ಪೋಕ್ಸೊ ವಿಶೇಷ ನ್ಯಾಯಾಲಯ, ವಾದ ಹಾಗೂ ಪ್ರತಿವಾದವನ್ನು ಆಲಿಸಿದ ನಂತರ ರಮಾಕಾಂತ ಅಲಿಯಾಸ್ ಗೋಲುಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ಪ್ರಕಟಿಸಿದ್ದಾರೆ' ಎಂದು ಪ್ರದೀಪ್ ತಿಳಿಸಿದ್ದಾರೆ.