ಕೋಲ್ಕತ್ತ: 'ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರು ಆಸ್ಪತ್ರೆಗೆ ಬೇಕಾದ ಔಷಧ ಮತ್ತು ವಿವಿಧ ಸಾಮಗ್ರಿಗಳ ಖರೀದಿ ಗುತ್ತಿಗೆ ಪಡೆಯುವಲ್ಲಿ ಎರಡು ಸಂಸ್ಥೆಗಳಿಗೆ ನೆರವು ನೀಡಿದ್ದಾರೆ' ಎಂದು ಸಿಬಿಐ ಆರೋಪಿಸಿದೆ.
ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಇತ್ತೀಚೆಗೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸಿಬಿಐ ಈ ಆಪಾದನೆ ಮಾಡಿದೆ.
ಸಂದೀಪ್ ಘೋಷ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ. ಹಾಗಾಗಿ, ವಿಶೇಷ ನ್ಯಾಯಾಲಯವು ಈ ಆರೋಪಪಟ್ಟಿ ಪರಿಗಣಿಸಿ, ವಿಚಾರಣೆ ಕೈಗೆತ್ತಿಕೊಳ್ಳಬೇಕಿದೆ.
ವೈದ್ಯಕೀಯ ಕಾಲೇಜಿನ ಮಾಜಿ ಸಿಬ್ಬಂದಿ ಆಶೀಶ್‌ಕುಮಾರ್ ಪಾಂಡೆ, ಉದ್ಯಮಿಗಳಾದ ಮಾ ತಾರಾ ಟ್ರೇಡರ್ಸ್‌ನ ವಿಪ್ಲವ್ ಸಿಂಘ, ಹಜ್ರಾ ಮೆಡಿಕಲ್ಸ್‌ನ ಸುಮನ್ ಹಜ್ರಾ ಹಾಗೂ ಈಶಾನ್ ಕೆಫೆಯ ಅಫ್ಸರ್ ಅಲಿ ಖಾನ್ ಅವರ ಹೆಸರುಗಳನ್ನು ಕೂಡ ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.
'ಘೋಷ್ ಮತ್ತು ಪಾಂಡೆ ಅವರು ನಿಯಮಗಳನ್ನು ಗಾಳಿಗೆ ತೂರಿ, ಹಲವು ವೈದ್ಯರನ್ನು ನೇಮಕ ಮಾಡಿದ್ದರು. ಆಸ್ಪತ್ರೆಗೆ ಅಗತ್ಯ ವಸ್ತುಗಳ ಖರೀದಿ ಗುತ್ತಿಗೆ ಪಡೆಯುವುದಕ್ಕೆ ಸಿಂಘ ಮತ್ತು ಹಜ್ರಾ ಹಾಗೂ ಖಾನ್ ಒಡೆತನದ ಸಂಸ್ಥೆಗಳಿಗೆ ಘೋಷ್ ನೆರವಾಗಿದ್ದರು' ಎಂದು ಸಿಬಿಐ ಆರೋಪಿಸಿದೆ.