ಭುವನೇಶ್ವರ: 2014ರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ 123 ಮಾವೋವಾದಿಗಳು ಹತರಾಗಿದ್ದಾರೆ. ಜತೆಗೆ 11 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸೋಮವಾರ ವಿಧಾನಸಭೆಗೆ ತಿಳಿಸಿದರು.
ಬಿಜೆಪಿ ಶಾಸಕ ಪ್ರಶಾಂತ ಕುಮಾರ್ ಜಗದೇವ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಮಾಝಿ, ರಾಜ್ಯದಲ್ಲಿ 2014ರ ಜನವರಿ 1ರಿಂದ 2024ರ ನವೆಂಬರ್ 15ರ ವರೆಗೆ 219 ಎನ್‌ಕೌಂಟರ್ ಪ್ರಕರಣಗಳು ನಡೆದಿವೆ. ಘಟನೆಗಳಲ್ಲಿ 123 ಮಾವೋವಾದಿಗಳನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದರು.
2014ರಲ್ಲಿ-6, 2015ರಲ್ಲಿ-9, 2017ರಲ್ಲಿ-7, 2018ರಲ್ಲಿ-19, 2019ರಲ್ಲಿ-8, 2020ರಲ್ಲಿ-16, 2021ರಲ್ಲಿ-7, 2022ರಲ್ಲಿ-7, 2023ರಲ್ಲಿ ಮೂವರು ಹಾಗೂ ಪ್ರಸಕ್ತ ವರ್ಷದಲ್ಲಿ ( ನವೆಂಬರ್ 15 ರವರೆಗೆ) ಐವರು ಮಾವೋವಾದಿಗಳನ್ನು ಹತ್ಯೆಗೈಯಲಾಗಿದೆ.
2016ರಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಅತಿ ಹೆಚ್ಚು ಅಂದರೆ 36 ಮಾವೋವಾದಿಗಳು ಹತರಾಗಿದ್ದಾರೆ.
ಹುತಾತ್ಮರಾದ 11 ಮಂದಿ ಭದ್ರತಾ ಸಿಬ್ಬಂದಿಯಲ್ಲಿ 2015 ಮತ್ತು 2022ರಲ್ಲಿ ತಲಾ ಮೂವರು, 2020ರಲ್ಲಿ ಇಬ್ಬರು, 2016, 2017 ಮತ್ತು 2019ರಲ್ಲಿ ತಲಾ ಒಬ್ಬ ಭದ್ರತಾ ಅಧಿಕಾರಿ ಮೃತಪಟ್ಟಿದ್ದಾರೆ. 2014, 2018, 2021, 2023 ಮತ್ತು 2024 (ನವೆಂಬರ್ 15 ರವರೆಗೆ) ಯಾವುದೇ ಭದ್ರತಾ ಸಿಬ್ಬಂದಿ ಮೃತಪಟ್ಟಿಲ್ಲ.