ನವದೆಹಲಿ: ವಿದೇಶದಲ್ಲಿ ನೆಲೆಸಿರುವ ಭಾರತೀಯರ ಮೇಲಿನ ದಾಳಿಗಳು ಮತ್ತು ಕೊಲೆ ಪ್ರಕರಣಗಳು ಹೆಚ್ಚಳವಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ, 2023 ರಲ್ಲಿ ಯುನೈಟೆಡ್ ಸ್ಟೇಟ್ಸ್, ಸೌದಿ ಅರೇಬಿಯಾ ಮತ್ತು ಕೆನಡಾ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆದ ದಾಳಿಗಳು ಮತ್ತು ಹತ್ಯೆಗಳಲ್ಲಿ 86 ಭಾರತೀಯರು ಮೃತಪಟ್ಟಿದ್ದಾರೆ ಎಂದು ರಾಜ್ಯಸಭೆಗೆ ತಿಳಿಸಿದೆ.
2022ರಲ್ಲಿ 57 ಮತ್ತು 2021 ರಲ್ಲಿ 29 ಪ್ರಕರಣಗಳಿಗೆ ಹೋಲಿಸಿದರೆ ಇದು ತೀವ್ರ ಹೆಚ್ಚಳವನ್ನು ಸೂಚಿಸುತ್ತದೆ ಎಂದು ಗುರುವಾರ ರಾಜ್ಯಸಭೆಗೆ ಸರ್ಕಾರ ಮಾಹಿತಿ ನೀಡಿದೆ.
2023 ರಲ್ಲಿ ಅಮೆರಿಕದಲ್ಲಿ 12 ಮಂದಿ ಹತ್ಯೆಯಾಗಿದ್ದಾರೆ. 2022 ರಲ್ಲಿ ಅಮೆರಿಕದಲ್ಲಿ 10 ಮಂದಿ ಕೊಲೆಯಾಗಿದ್ದರು. ಸೌದಿ ಅರೇಬಿಯಾದಲ್ಲಿ 2023 ರಲ್ಲಿ 10 ಪ್ರಕರಣಗಳು ವರದಿಯಾಗಿವೆ. 2022ರಲ್ಲಿ 6 ಪ್ರಕರಣ ವರದಿಯಾಗಿದ್ದವು.
ಇನ್ನು ಕೆನಡಾದಲ್ಲೂ ಗಮನಾರ್ಹ ಏರಿಕೆ ಕಂಡಿದ್ದು, 2023 ರಲ್ಲಿ 10 ಭಾರತೀಯ ಪ್ರಜೆಗಳು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಫಿಲಿಪೈನ್ಸ್ ಇದೇ ಅವಧಿಯಲ್ಲಿ ಐದು ಅಂತಹ ಪ್ರಕರಣಗಳನ್ನು ದಾಖಲಿಸಿದೆ.
ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಯೋಗಕ್ಷೇಮವು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಕೇಂದ್ರ ಸರ್ಕಾರ ಮೇಲ್ಮನೆಗೆ ಭರವಸೆ ನೀಡಿದೆ.