ಅಗರ್ತಲಾ: ಈ ವರ್ಷ ಇಲ್ಲಿಯವರೆಗೆ 55 ರೋಹಿಂಗ್ಯಾಗಳು ಸೇರಿದಂತೆ ಒಟ್ಟು 675 ಅಕ್ರಮ ವಲಸಿಗರನ್ನು ಬಿಎಸ್‌ಎಫ್‌ನ ತ್ರಿಪುರಾ ಫ್ರಾಂಟಿಯರ್ ಬಂಧಿಸಿದೆ ಎಂದು ಅಧಿಕೃತ ಪ್ರಕಟಣೆ ಭಾನುವಾರ ತಿಳಿಸಿದೆ.
ಈ ವರ್ಷದ ಜನವರಿ 1 ರಿಂದ ನವೆಂಬರ್ 30 ರವರೆಗಿನ ವಿವಿಧ ಕಾರ್ಯಾಚರಣೆಗಳಲ್ಲಿ 55 ರೋಹಿಂಗ್ಯಾ ಅಕ್ರಮ ವಲಸಿಗರು, 620 ಬಾಂಗ್ಲಾದೇಶಿ ಪ್ರಜೆಗಳು ಮತ್ತು 260 ಭಾರತೀಯರನ್ನು ಬಿಎಸ್‌ಎಫ್ ಬಂಧಿಸಿದೆ. ಈ ಅವಧಿಯಲ್ಲಿ 66,316 ಬಾಟಲ್ ಫೆನ್ಸೆಡೈಲ್ ಕೆಮ್ಮಿನ ಸಿರಪ್, 9,000 ಕೆಜಿಗೂ ಹೆಚ್ಚು ಗಾಂಜಾ ಮತ್ತು ಆರು ಲಕ್ಷಕ್ಕೂ ಹೆಚ್ಚು ಟ್ಯಾಬ್ಲೆಟ್‌ಗಳನ್ನು ಬಿಎಸ್ಎಫ್ ವಶಪಡಿಸಿಕೊಂಡಿದೆ ಎಂದು ಪ್ರಕಟಣೆ ಹೇಳಿದೆ.
ಇದರ ಜೊತೆಗೆ ಬಾಂಗ್ಲಾದೇಶದ(ತ್ರಿಪುರಾದಲ್ಲಿ) 856-ಕಿಮೀ ಗಡಿಯಲ್ಲಿ ಕಟ್ಟುನಿಟ್ಟಾದ ಕಾವಲು ಕಾಯ್ದುಕೊಳ್ಳುವುದು ಬಿಎಸ್‌ಎಫ್‌ನ ಪ್ರಮುಖ ಕರ್ತವ್ಯವಾಗಿದೆ ಎಂದು ಭಾನುವಾರ ಬಿಎಸ್‌ಎಫ್ ಸಂಸ್ಥಾಪನಾ ದಿನದಂದು ಹೊರಡಿಸಿದ ಪ್ರಕಟಣೆ ತಿಳಿಸಿದೆ.
ಇದಕ್ಕೂ ಮುನ್ನ ಪಶ್ಚಿಮ ತ್ರಿಪುರಾದ ಶಾಲ್ಬಗಾನ್‌ನಲ್ಲಿರುವ ಬಿಎಸ್‌ಎಫ್ ಫ್ರಾಂಟಿಯರ್ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು, ಅಂತಾರಾಷ್ಟ್ರೀಯ ಗಡಿಯಲ್ಲಿ ಅರೆಸೇನಾ ಪಡೆಯ ಕಾರ್ಯವನ್ನು ಶ್ಲಾಘಿಸಿದರು.
ಇದೇ ವೇಳೆ ಸಿಎಂ ಸಹಾ ಅವರು ಕರ್ತವ್ಯದ ವೇಳೆ ತಮ್ಮ ಪ್ರಾಣವನ್ನು ಅರ್ಪಿಸಿದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು 1971 ರ ಯುದ್ಧದ ಯೋಧರನ್ನು ಅಭಿನಂದಿಸಿದರು.