ಢಾಕಾ: 2025ರ ಅಂತ್ಯದಲ್ಲಿ ಅಥವಾ 2026ರ ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ತಿಳಿಸಿದರು.
ಬಾಂಗ್ಲಾದೇಶ ವಿಮೋಚನೆಯ ನೆನಪಿಗಾಗಿ ಆಚರಿಸುವ 'ವಿಜಯ ದಿವಸ್' ಅಂಗವಾಗಿ ದೂರದರ್ಶನದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಯೂನುಸ್, 'ದೇಶದಲ್ಲಿನ ರಾಜಕೀಯ ಸ್ಥಿತಿಗತಿ ಹಾಗೂ ಸಮಸ್ಯೆಗಳ ನಿವಾರಣೆಗೆ ಕೈಗೊಳ್ಳುವ ಸುಧಾರಣೆಗಳ ಆಧಾರದ ಮೇಲೆ ಚುನಾವಣೆಗೆ ಸಮಯ ನಿಗದಿ ಮಾಡಲಾಗುವುದು.
ಎಲ್ಲ ಪ್ರಮುಖ ಸುಧಾರಣೆಗಳು ಪೂರ್ಣಗೊಂಡ ಬಳಿಕವೇ ಚುನಾವಣೆಯತ್ತ ಗಮನಹರಿಸುವಂತೆ ಮನವಿ ಮಾಡಿದ್ದೇನೆ' ಎಂದು ಹೇಳಿದರು.
ದೋಷರಹಿತವಾಗಿ ಮತದಾರರ ಪಟ್ಟಿಯನ್ನು ತಯಾರಿಸಿ ಅದರ ಆಧಾರದ ಮೇಲೆ ಕೆಲ ಸುಧಾರಣೆಗಳೊಂದಿಗೆ 2025ರ ಅಂತ್ಯದ ವೇಳೆಗೆ ಚುನಾವಣೆ ನಡೆಸಲು ಸಾಧ್ಯವಿದೆ. ರಾಷ್ಟ್ರೀಯ ಒಮ್ಮತ ಹಾಗೂ ಚುನಾವಣಾ ಆಯೋಗದ ಸಲಹೆಗಳೊಂದಿಗೆ ಸುಧಾರಣೆಗಳನ್ನು ತರಲು 6 ತಿಂಗಳು ಬೇಕಾಗುತ್ತದೆ' ಎಂದು ಹೇಳಿದರು.
ಭಾರತದ ಸೇನೆಯು ಪಾಕಿಸ್ತಾನದೊಂದಿಗೆ ಹೋರಾಡಿ ಗೆಲುವು ಸಾಧಿಸಿ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದ ದಿನವನ್ನು 'ವಿಜಯ್ ದಿವಸ್' ಎಂದು ಆಚರಿಸಲಾಗುತ್ತದೆ.