ನವದೆಹಲಿ: ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ದೇಶದಾದ್ಯಂತ ನಡೆಯುವ 'ಕಾಮನ್ ಯುನಿವರ್ಸಿಟಿ ಎಂಟ್ರೆನ್ಸ್ ಟೆಸ್ಟ್' (ಸಿಯುಇಟಿ)- 2025ರಲ್ಲಿ ಕೆಲವು ಬದಲಾವಣೆಗಳನ್ನು ತರಲು ಉದ್ದೇಶಿಸಿದ್ದು, ಸದ್ಯದಲ್ಲಿಯೇ ಆ ಕುರಿತ ಕರಡು ಪ್ರಸ್ತಾವನೆಯನ್ನು ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದ್ದಾರೆ.
ಯು.ಜಿ ಮತ್ತು ಪಿ.ಜಿ ಪ್ರವೇಶ ಪರೀಕ್ಷೆಯಲ್ಲಿ ಸುಧಾರಣೆಗಳನ್ನು ತರಲು ಯುಜಿಸಿ ತಜ್ಞರ ಸಮಿತಿ ರಚಿಸಿತ್ತು. ಸಮಿತಿಯು ಪರೀಕ್ಷಾ ವಿಧಾನ, ಪರೀಕ್ಷಾ ಅವಧಿ, ಪಠ್ಯಕ್ರಮ, ಪರೀಕ್ಷಾ ಪರಿಕರಗಳ ಸಾಗಣೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ. ಇತ್ತೀಚೆಗೆ ನಡೆದ ಆಯೋಗದ ಸಭೆಯಲ್ಲಿ ಈ ವರದಿಯ ಶಿಫಾರಸುಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಯುಜಿಸಿಯು ಶೀಘ್ರದಲ್ಲಿಯೇ ಪರಿಷ್ಕೃತ ಮಾರ್ಗಸೂಚಿಯ ಕರಡು ಪ್ರಸ್ತಾವವನ್ನು ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳಿಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಆಹ್ವಾನಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಸಿಯುಇಟಿ-ಯುಜಿ ಪರೀಕ್ಷೆಯು ದೇಶದಲ್ಲಿ ಮೊದಲ ಬಾರಿಗೆ 2022ರಲ್ಲಿ ನಡೆದಿತ್ತು. 2024ರಲ್ಲಿ ಮೊದಲ ಬಾರಿಗೆ ಹೈಬ್ರಿಡ್ ಮಾದರಿಯಲ್ಲಿ ಪರೀಕ್ಷೆ ನಡೆಸಿತ್ತು. ಆಗ ಪರೀಕ್ಷೆಯ ಹಿಂದಿನ ದಿನ ದೆಹಲಿಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.