ನವದೆಹಲಿ: ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ದೇಶದಾದ್ಯಂತ ನಡೆಯುವ 'ಕಾಮನ್ ಯುನಿವರ್ಸಿಟಿ ಎಂಟ್ರೆನ್ಸ್ ಟೆಸ್ಟ್'ಅನ್ನು (ಸಿಯುಇಟಿ-ಯುಜಿ) 2025ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮಾದರಿಯಲ್ಲಿ ನಡೆಸಲಾಗುವುದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ 12ನೇ ತರಗತಿಯಲ್ಲಿ ಅಧ್ಯಯನ ಮಾಡದ ವಿಷಯಗಳ ಹೊರತಾಗಿಯೂ ಬೇರೆ ಯಾವುದೇ ವಿಷಯದಲ್ಲಿ ಪರೀಕ್ಷೆಗೆ ಹಾಜರಾಗುವ ಅವಕಾಶವನ್ನು ಪರಿಷ್ಕೃತ ನಿಯಮದಲ್ಲಿ ನೀಡಲಾಗಿದೆ.
ಯುಜಿಸಿ ರಚಿಸಿದ್ದ ತಜ್ಞರ ಸಮಿತಿಯು ಪರೀಕ್ಷೆಯ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತರುವ ಶಿಫಾರಸು ಮಾಡಿದೆ ಎಂದು ಪಿಟಿಐ ಜತೆಗಿನ ಸಂವಾದದಲ್ಲಿ ಅವರು ಹೇಳಿದ್ದಾರೆ.
'ಕಳೆದ ವರ್ಷ ಪರೀಕ್ಷೆಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಿದ್ದರೆ, ಮುಂದಿನ ಬಾರಿ ಸಿಬಿಟಿ ಮಾದರಿಯಲ್ಲಿ ನಡೆಸಲಾಗುವುದು. ಪರೀಕ್ಷೆಯ ವಿಷಯಗಳ ಸಂಖ್ಯೆಯನ್ನು 63 ರಿಂದ 37ಕ್ಕೆ ಕಡಿತಗೊಳಿಸಿದ್ದೇವೆ. ಕೈಬಿಡಲಾದ ವಿಷಯಗಳಿಗೆ ಸಂಬಂಧಿಸಿದ ಪ್ರವೇಶವನ್ನು ಜನರಲ್ ಆಪ್ಟಿಟ್ಯೂಡ್ ಪರೀಕ್ಷೆಯ (ಜಿಎಟಿ) ಅಂಕಗಳ ಆಧಾರದಲ್ಲಿ ನೀಡಲಾಗುವುದು' ಎಂದಿದ್ದಾರೆ.
'12ನೇ ತರಗತಿಯಲ್ಲಿ ಕಲಿಯದ ವಿಷಯಗಳನ್ನು ಆಯ್ಕೆ ಮಾಡಿ ಸಿಯುಇಟಿ-ಯುಜಿ ಪರೀಕ್ಷೆ ಎದುರಿಸಲು ಅನುಮತಿ ನೀಡುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಯ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಅನುವು ಮಾಡಿಕೊಡಲಿದೆ' ಎಂದು ಹೇಳಿದ್ದಾರೆ.
ಇತರ ಬದಲಾವಣೆಗಳು...
* ವಿದ್ಯಾರ್ಥಿಗಳಿಗೆ ಗರಿಷ್ಠ ಐದು ವಿಷಯಗಳಲ್ಲಿ ಪರೀಕ್ಷೆಗೆ ಹಾಜರಾಗಬಹುದು. ಇದುವರೆಗೆ ಆರು ವಿಷಯಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಇತ್ತು.
* ಎಲ್ಲ ಪರೀಕ್ಷೆಗಳಿಗೆ 60 ನಿಮಿಷಗಳ ಅವಧಿ ನಿಗದಿಪಡಿಸಲಾಗಿದೆ. ಈ ಹಿಂದೆ ಪರೀಕ್ಷೆಯ ಅವಧಿಯು ವಿಷಯದ ಆಧಾರದ ಮೇಲೆ 45ರಿಂದ 60 ನಿಮಿಷಗಳವರೆಗೆ ಇರುತ್ತಿತ್ತು.
* ಐಚ್ಛಿಕ ಪ್ರಶ್ನೆಗಳ ಪರಿಕಲ್ಪನೆಯನ್ನು ತೆಗೆದುಹಾಕಲಾಗಿದ್ದು ಎಲ್ಲಾ ಪ್ರಶ್ನೆಗಳು ಈಗ ಕಡ್ಡಾಯವಾಗಿರುತ್ತವೆ.