ಹೊಸ ವರ್ಷ ಬರುತ್ತಿದೆ. ಅದರ ಜೊತೆಯಲ್ಲೇ ದಿನನಿತ್ಯದ ಜೀವನದ ಮೇಲೆ ಪ್ರಭಾವ ಬೀರುವ ಕೆಲವು ನಿಯಮಗಳಲ್ಲಿ ಒಂದಿಷ್ಟು ಬದಲಾವಣೆಗಳು ಜಾರಿಗೆ ಬರುತ್ತಿವೆ. ಹಾಗೆಯೇ, ಬೆಲೆಯೇರಿಕೆಯ ಬಿಸಿಯೂ ಒಂಚೂರು ಇದೆ. ಬಹುತೇಕ ಬದಲಾವಣೆಗಳು ಹಣಕಾಸಿನ ಲೋಕಕ್ಕೆ ಸಂಬಂಧಿಸಿದವು. ಕೆಲವು ಮಹತ್ವದ ಬದಲಾವಣೆಗಳ ಮೇಲೊಂದು ಪಕ್ಷಿನೋಟ ಇಲ್ಲಿದೆ.
ಯುಪಿಐ123 ಮೂಲಕ ಹೆಚ್ಚಿನ ಪಾವತಿ
ಫೀಚರ್ ಫೋನ್‌ಗಳಲ್ಲಿ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಯನ್ನು ಬಳಕೆ ಮಾಡುವವರ ಅನುಕೂಲಕ್ಕಾಗಿ, ಪ್ರತಿ ವಹಿವಾಟಿನ ಗರಿಷ್ಠ ಮೊತ್ತ ₹5,000 ಇರುವುದನ್ನು ₹10 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಆರ್‌ಬಿಐ ಹೇಳಿತ್ತು. ಈ ಸೌಲಭ್ಯವು 2025ರ ಜನವರಿ 1ಕ್ಕೆ ಮೊದಲು ಜಾರಿಗೆ ಬರಬೇಕು ಎಂದು ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಸಲಹೆ ಸ್ವರೂಪದ ಸೂಚನೆ ನೀಡಿದೆ. ಇದು ಜಾರಿಯಾದಾಗ, ಫೀಚರ್ ಫೋನ್‌ನಲ್ಲಿ ಯುಪಿಐ ವ್ಯವಸ್ಥೆ ಬಳಕೆ ಮಾಡುವವರಿಗೆ ಹೆಚ್ಚಿನ ಮೊತ್ತ ಪಾವತಿಸಲು ಸಾಧ್ಯವಾಗಲಿದೆ.
ಆರ್‌ಟಿಜಿಎಸ್-ನೆಫ್ಟ್ ಬಳಕೆದಾರರಿಗೆ ಹೊಸ ಸೌಲಭ್ಯ
ಆನ್‌ಲೈನ್ ಮೂಲಕ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಲು ಬಳಸುವ ಆರ್‌ಟಿಜಿಎಸ್ ಹಾಗೂ ಎನ್‌ಇಎಫ್‌ಟಿ ಸೌಲಭ್ಯಕ್ಕೆ ಹೊಸದೊಂದು ಅನುಕೂಲವನ್ನು ಸೇರಿಸಲು ಆರ್‌ಬಿಐ ಸೂಚನೆ ನೀಡಿದೆ. ಈ ಸೌಲಭ್ಯ ಬಳಕೆ ಮಾಡುವಾಗ ಹಣ ಯಾರ ಖಾತೆಗೆ ವರ್ಗಾವಣೆ ಆಗುತ್ತದೆಯೋ ಅವರ ಖಾತೆ ಸಂಖ್ಯೆ, ಬ್ಯಾಂಕ್ ಶಾಖೆಯ ಐಎಫ್‌ಎಸ್‌ಸಿ ಕೋಡ್ ನಮೂದಿಸಬೇಕು. ಹೀಗೆ ನಮೂದಿಸಿದಾಗ ಖಾತೆದಾರರ ಹೆಸರನ್ನು ತೋರಿಸುವ ಸೌಲಭ್ಯ ನೀಡಬೇಕಿದ್ದು, ಇದು 2025ರ ಏಪ್ರಿಲ್ 1ಕ್ಕೆ ಮೊದಲು ಜಾರಿಗೆ ಬರಬೇಕು ಎಂದು ಆರ್‌ಬಿಐ ಹೇಳಿದೆ.
ಈ ರೀತಿಯಲ್ಲಿ ಹೆಸರು ತೋರಿಸುವ ವ್ಯವಸ್ಥೆಯು ಯುಪಿಐನಲ್ಲಿ ಈಗಾಗಲೇ ಇದೆ. ಆರ್‌ಟಿಜಿಎಸ್ ಹಾಗೂ ಎನ್‌ಇಎಫ್‌ಟಿಯಲ್ಲಿ ಇದು ಜಾರಿಗೆ ಬಂದಾಗ, ಬಳಕೆದಾರರಿಗೆ ಹಣ ವರ್ಗಾವಣೆ ಮಾಡುವಾಗ ಅಳುಕು ಇರುವುದಿಲ್ಲ. ಖಾತೆ ಸಂಖ್ಯೆ ತಪ್ಪಾಗಿ ಬೇರೊಬ್ಬರಿಗೆ ಹಣ ವರ್ಗಾವಣೆಯಾಗುವ ಸಾಧ್ಯತೆ ಕ್ಷೀಣಿಸುತ್ತದೆ ಎಂಬುದು ಆರ್‌ಬಿಐ ಲೆಕ್ಕಾಚಾರ.
ಹೊಸ ವರ್ಷದಲ್ಲಿ ಬೆಲೆ ಏರಿಕೆ
ಹೊಸ ವರ್ಷಕ್ಕೂ ಬೆಲೆ ಏರಿಕೆಗೂ ನಂಟು ಒಂದಲ್ಲ ಒಂದು ಬಗೆಯಲ್ಲಿ ಇದ್ದೇ ಇರುತ್ತದೆ. ಹೊಸ ವರ್ಷದಲ್ಲಿ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಪ್ರಮುಖ ಕಾರು ತಯಾರಿಕಾ ಕಂಪನಿಗಳಾದ ಟಾಟಾ ಮೋಟರ್ಸ್, ಕಿಯಾ ಮೋಟರ್ಸ್, ಮಾರುತಿ ಸುಜುಕಿ, ಹುಂಡೈ, ಮಹೀಂದ್ರ ಆಯಂಡ್ ಮಹೀಂದ್ರ, ಜೆಎಸ್‌ಡಬ್ಲ್ಯು ಎಂಜಿ ಮೋಟರ್, ಔಡಿ, ಬಿಎಂಡಬ್ಲ್ಯು ಹೇಳಿವೆ. ವಾಹನಗಳ ಬೆಲೆ ಏರಿಕೆ ಪ್ರಮಾಣವು ಶೇ 3ರವರೆಗೆ ಇರಲಿದೆ.
ಸಣ್ಣ ಉಳಿತಾಯದ ಬಡ್ಡಿ?
ಪಿಪಿಎಫ್, ಎನ್‌ಎಸ್‌ಸಿಯಂತಹ ಸಣ್ಣ ಉಳಿತಾಯ ಯೋಜನೆಗಳಲ್ಲಿ ತೊಡಗಿಸುವ ಹಣಕ್ಕೆ ನೀಡುವ ಬಡ್ಡಿಯ ಪ್ರಮಾಣವನ್ನು ಕೇಂದ್ರ ಸರ್ಕಾರವು ಪ್ರತಿ ಮೂರು ತಿಂಗಳಿಗೆ ಒಮ್ಮೆ (ಆರ್ಥಿಕ ತ್ರೈಮಾಸಿಕಕ್ಕೆ ಅನುಗುಣವಾಗಿ) ತೀರ್ಮಾನಿಸುತ್ತದೆ. ಜನವರಿ 1ರಿಂದ ಹೊಸ ವರ್ಷ ಮಾತ್ರವಲ್ಲದೆ, ಹೊಸ ಆರ್ಥಿಕ ತ್ರೈಮಾಸಿಕವೂ ಶುರುವಾಗುವ ಕಾರಣ, ಬಡ್ಡಿ ದರಗಳಲ್ಲಿ ಯಾವುದಾದರೂ ಬದಲಾವಣೆ ಇದೆಯೇ ಎಂಬುದನ್ನು ಕೇಂದ್ರವು ಡಿಸೆಂಬರ್ 31ರಂದು ಪ್ರಕಟಿಸಲಿದೆ. ಬಡ್ಡಿ ದರಗಳಲ್ಲಿ ಬದಲಾವಣೆ ಆದಲ್ಲಿ ಅದು ಜನವರಿ 1ರಿಂದ ಅನ್ವಯ ಆಗುವುದು ವಾಡಿಕೆ.
ಯಾವುದೇ ಬ್ಯಾಂಕ್‌ನಿಂದ ಇಪಿಎಸ್ ಪಿಂಚಣಿ
ಇಪಿಎಸ್ ಪಿಂಚಣಿ ಸೌಲಭ್ಯ ಪಡೆಯುತ್ತ ಇರುವವರಿಗೆ ಯಾವುದೇ ಬ್ಯಾಂಕ್‌ನಿಂದ, ಯಾವುದೇ ಶಾಖೆಯಿಂದ, ಭಾರತದ ಯಾವುದೇ ಕಡೆಯಿಂದ ಪಿಂಚಣಿ ಹಣ ಪಡೆಯುವ ಸೌಲಭ್ಯ ಕಲ್ಪಿಸುವ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯ ಜಾರಿಗೆ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಕೇಂದ್ರ ಧರ್ಮದರ್ಶಿಗಳ ಮಂಡಳಿಯು ಈಗಾಗಲೇ ಒಪ್ಪಿಗೆ ನೀಡಿದೆ. ಹೊಸ ವ್ಯವಸ್ಥೆ ಜನವರಿಯಲ್ಲಿ ಜಾರಿಗೆ ಬರುವ ನಿರೀಕ್ಷೆ ಇದೆ.