ಚಂಡೀಗಢ: ಸುಳ್ಳು ಹಬ್ಬಿಸುವುದನ್ನು ಮುಂದುವರೆಸಿದರೆ 2029ರ ವೇಳೆಗೆ ಕಾಂಗ್ರೆಸ್ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಹೇಳಿದ್ದಾರೆ.
ಕೈತಾಲ್ ಜಿಲ್ಲೆಯ ಪುಂಡ್ರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಕಾಂಗ್ರೆಸ್ ಸುಳ್ಳುಗಳನ್ನು ಹರಡುವುದನ್ನು ಮುಂದುವರೆಸಿದರೆ, 2029ರ ವೇಳೆಗೆ ಅದು ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.
ಕಾಂಗ್ರೆಸ್‌ಗೆ ಸ್ಪಷ್ಟ ನೀತಿ, ನಿರ್ದೇಶನ ಮತ್ತು ನಾಯಕತ್ವದ ಕೊರತೆಯಿದೆ. ಮತಗಳನ್ನು ಪಡೆಯಲು 'ಸುಳ್ಳು ಮತ್ತು ವಂಚನೆ'ಯನ್ನು ಆಶ್ರಯಿಸಿದೆ' ಎಂದು ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶವನ್ನು ಉಲ್ಲೇಖಿಸಿ ಮಾತನಾಡಿದ ಸೈನಿ, 'ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾದರೆ ಸಂವಿಧಾನಕ್ಕೆ ಅಪಾಯವಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಆದರೆ, ಸಂವಿಧಾನಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಯಾರಿಗಾದರೂ ಅಪಾಯವಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ' ಎಂದು ಹೇಳಿದ್ದಾರೆ.
2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಪ್ರಧಾನಿ ಮೋದಿ ಅವರ ಗುರಿಯನ್ನು 'ಡಬಲ್ ಎಂಜಿನ್' ಸರ್ಕಾರ ನಿಸ್ಸಂದೇಹವಾಗಿ ಈಡೇರಿಸುತ್ತದೆ ಎಂದು ಸೈನಿ ತಿಳಿಸಿದ್ದಾರೆ.