ನವದೆಹಲಿ: 'ಭಾರತದ ಪರಮಾಣುಶಕ್ತಿ ಕಳೆದ ಒಂದು ದಶಕದಲ್ಲಿ ದುಪ್ಪಟ್ಟಾಗಿದ್ದು, 2031ರ ಹೊತ್ತಿಗೆ ಇದು ಮೂರು ಪಟ್ಟು ಹೆಚ್ಚಾಗಲಿದೆ' ಎಂದು ಕೇಂದ್ರ ಅಣುಶಕ್ತಿ ಸಚಿವ ಜಿತೇಂದ್ರ ಸಿಂಗ್ ಬುಧವಾರ ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು, '2014ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ 4,780 ಮೆಗಾವ್ಯಾಟ್ ಪರಮಾಣುಶಕ್ತಿಯ ಸಾಮರ್ಥ್ಯವಿತ್ತು.
2024ರ ಹೊತ್ತಿಗೆ ಇದು 8,081 ಮೆಗಾವ್ಯಾಟ್‌ಗೆ ಹೆಚ್ಚಳವಾಗಿದೆ. ಕಳೆದ 60 ವರ್ಷಗಳಲ್ಲಿ ಆಗದ್ದು, ಕೇವಲ ಕಳೆದ ಹತ್ತು ವರ್ಷಗಳಲ್ಲಿ ಆಗಿದೆ. 2031-32ರ ಹೊತ್ತಿಗೆ ಅಣುಶಕ್ತಿಯ ಉತ್ಪಾದನೆ 22,480 ಮೆಗಾವ್ಯಾಟ್‌ಗೆ ಹೆಚ್ಚಳವಾಗಲಿದೆ' ಎಂದು ತಿಳಿಸಿದರು.
'ಈ ಬೆಳವಣಿಗೆಯು ಕೇವಲ ತಂತ್ರಜ್ಞಾನ ಪರಿಣತಿಯಿಂದ ಆಗಿಲ್ಲ, ಬದಲಿಗೆ ರಾಜಕೀಯ ಇಚ್ಛಾಶಕ್ತಿಯೂ ಪ್ರಮುಖ ಪಾತ್ರ ವಹಿಸುತ್ತದೆ. ದೇಶದಲ್ಲಿ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಎಂದೂ ಬರಬಂದಿಲ್ಲ. ಆದರೆ 2014ರವರೆಗೂ ಸೂಕ್ತ ನಾಯಕತ್ವದ ಕೊರತೆ ಇತ್ತು. ಅದು ಈಗ ತುಂಬಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ' ಎಂದರು.
'ಸದ್ಯದ ಸೂತ್ರದ ಪ್ರಕಾರ ಯಾವ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆಯೋ ಆ ರಾಜ್ಯಕ್ಕೆ ಶೇ 50ರಷ್ಟನ್ನು ನೀಡಲಾಗುತ್ತಿದೆ. ಶೇ 35ರಷ್ಟು ಪಕ್ಕದ ರಾಜ್ಯಗಳಿಗೆ ಹಾಗೂ ಶೇ 15ರಷ್ಟು ರಾಷ್ಟ್ರೀಯ ಗ್ರಿಡ್‌ಗೆ ಪೂರೈಕೆ ಆಗುತ್ತಿದೆ. ಇದು ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿದೆ' ಎಂದು ಸಿಂಗ್ ಹೇಳಿದ್ದಾರೆ.
'ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ ಯೋಜನೆ ಯಶಸ್ಸಿನ ಬೆನ್ನಲ್ಲೇ ಅಲ್ಲಿ ನಾಲ್ಕು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಕಲ್ಪಾಕಂ ಕೂಡಾ 2014ರ ನಂತರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ತಿರುನೆಲ್ವೆಲಿ ಯೋಜನೆ ಸ್ಥಗಿತಗೊಂಡಿದೆ' ಎಂದು ಸಿಂಗ್, ಹೋಮಿ ಭಾಭಾ ಅವರಿಂದಾಗಿ ಅಣುಶಕ್ತಿಯನ್ನು ಉತ್ಕಾರ್ಯಗಳಿಗೆ ಬಳಕೆಯಾಗುತ್ತಿದೆ' ಎಂದಿದ್ದಾರೆ.
ಅಣು ಶಕ್ತಿಯಿಂದಾಗಿ ಕೃಷಿ ಕ್ಷೇತ್ರದಲ್ಲೂ ಸಾಕಷ್ಟು ಪ್ರಗತಿ ಸಾಧಿಸಲಾಗಿದ್ದು, 70 ಮ್ಯುಟೇಜೆನಿಕ್ ಬೆಳೆ ವೈವೀಧ್ಯಗಳನ್ನು ಪರಿಚಯಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತಿದೆ. ಈ ಎಲ್ಲದರಿಂದಾಗಿ ಅಣುಶಕ್ತಿಯನ್ನು ಶಾಂತಿಯುತ ಹಾಗೂ ನವೀನ ಉದ್ದೇಶಗಳಿಗಾಗಿ ಅಣುಶಕ್ತಿಯನ್ನು ಬಳಸಲಾಗುತ್ತಿದೆ. ಕಡಲತೀರದಲ್ಲಿ ದೊರೆಯುವ ಖನಿಜ ನಿಕ್ಷೇಪವಾದ ಥೋರಿಯಂ ಜಗತ್ತಿನ ಶೇ 21ರಷ್ಟು ಭಾಗ ಭಾರತದಲ್ಲಿದೆ. ಇದರ ಪರಿಣಾಮಕಾರಿ ಬಳಕೆಗೆ ಭಾವಿನಿ ಎಂಬ ಪ್ರಯೋಗಾತ್ಮಕ ಯೋಜನೆಯನ್ನು ಆರಂಭಿಸಲಾಗಿದ್ದು, ಇದರಿಂದ ಯುರೇನಿಯಂ ಮೇಲಿನ ಅತಿಯಾದ ಅವಲಂಬನೆ ಕಡಿಮೆಯಾಗಲಿದೆ' ಎಂದರು.