ಅವಿನ್ಯೊ : ಫ್ರಾನ್ಸ್‌ಅನ್ನು ಬೆಚ್ಚಿ ಬೀಳಿಸಿದ್ದ ಮತ್ತು ವಿಶ್ವದಾದ್ಯಂತ ಗಮನ ಸೆಳೆದಿದ್ದ ಜಿಸೆಲ್ ಪೆಲಿಕೊ ಅತ್ಯಾಚಾರ ಪ್ರಕರಣದಲ್ಲಿ, ಮಾಜಿ ಪತಿ ಡೊಮಿನಿಕ್ ಪೆಲಿಕೊಗೆ ಫ್ರಾನ್ಸ್‌ನ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಮೂರು ತಿಂಗಳ ವಿಚಾರಣೆಯ ಬಳಿಕ ಡೊಮಿನಿಕ್ ಸೇರಿ ಈ ಪ್ರಕರಣದ ಎಲ್ಲ 50 ಆರೋಪಿಗಳೂ ತಪ್ಪಿತಸ್ಥರು ಎಂದು ನ್ಯಾಯಾಲಯ ಗುರುವಾರ ಪ್ರಕಟಿಸಿತು.
ಡೊಮಿನಿಕ್‌ಗೆ ಗರಿಷ್ಠ ಶಿಕ್ಷೆ ವಿಧಿಸಿದರೆ, ಇತರರನ್ನು 3 ರಿಂದ 15 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ.
'ನಾನು ಮಾಡಿರುವ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತೇನೆ. ನನ್ನಿಂದಾಗಿ ಸಂಕಷ್ಟ ಅನುಭವಿಸಿದ ಕುಟುಂಬದವರ ಕ್ಷಮೆ ಕೇಳುತ್ತೇನೆ' ಎಂದು 72 ವರ್ಷದ ಡೊಮಿನಿಕ್ ಹೇಳಿದ್ದಾನೆ.
ಏನಿದು ಪ್ರಕರಣ?: ಜಿಸೆಲ್‌ಗೆ ಪದೇ ಪದೇ ಮಾದಕ ದ್ರವ್ಯ ನೀಡಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಇತರರಿಗೆ ಅವಕಾಶ ಮಾಡಿಕೊಟ್ಟ ಆರೋಪ ಡೊಮಿನಿಕ್ ಮೇಲಿತ್ತು. 2011ರಿಂದ 2020ರ ವರೆಗಿನ ಅವಧಿಯಲ್ಲಿ ಫ್ರಾನ್ಸ್‌ನ ದಕ್ಷಿಣ ಪ್ರಾಂತ್ಯದಲ್ಲಿರುವ ಮನೆಯಲ್ಲಿ ಜಿಸೆಲ್ ಮೇಲೆ ದೌರ್ಜನ್ಯ ನಡೆದಿತ್ತು. ಆನ್‌ಲೈನ್ ಮೂಲಕ ಡೊಮಿನಿಕ್‌ಗೆ ಪರಿಚಯವಾಗಿದ್ದ 50 ಮಂದಿ, ಜಿಸೆಲ್ ಮೇಲೆ ಅತ್ಯಾಚಾರ ಎಸಗಿರುವುದು ಸಾಬೀತಾಗಿದೆ. ಅತ್ಯಾಚಾರ ದೃಶ್ಯವನ್ನು ಡೊಮಿನಿಕ್ ರೆಕಾರ್ಡ್ ಮಾಡಿಡುತ್ತಿದ್ದ.
ಇತರ ಅಪರಾಧಿಗಳಿಗೆ 4ರಿಂದ 18 ವರ್ಷಗಳವರೆಗಿನ ವಿವಿಧ ಅವಧಿಯ ಜೈಲು ಶಿಕ್ಷೆ ವಿಧಿಸಬೇಕು ಎಂದು ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯ ಕಡಿಮೆ ಶಿಕ್ಷೆ ವಿಧಿಸಿರುವುದನ್ನು ಮಹಿಳಾ ಪರ ಹೋರಾಟಗಾರರು ಮತ್ತು ಜಿಸೆಲ್ ಅವರ ಮೂವರು ಮಕ್ಕಳು ಟೀಕಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಆದರೆ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ 72 ವರ್ಷದ ಜಿಸೆಲ್, 'ನ್ಯಾಯಾಲಯ ಮತ್ತು ಅದು ನೀಡಿರುವ ತೀರ್ಪನ್ನು ಗೌರವಿಸುತ್ತೇನೆ' ಎಂದಿದ್ದಾರೆ.
ಈ ಪ್ರಕರಣದ ವಿಚಾರಣೆಯ ವೇಳೆ ಜಿಸೆಲ್ ಅವರಿಗೆ ಬೆಂಬಲ ಸೂಚಿಸಿ ಫ್ರಾನ್ಸ್‌ನಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರಾನ್ಸ್‌ನಲ್ಲಿರುವ ಕಾನೂನಿಗೆ ಬದಲಾವಣೆ ತರಬೇಕು ಎಂಬ ಚರ್ಚೆಯನ್ನೂ ಈ ಪ್ರಕರಣ ಹುಟ್ಟುಹಾಕಿತ್ತು.