ಬಂಡ ಆಚೆ : 2.30 ಲಕ್ಷ ಮಂದಿಯ ಸಾವಿಗೆ ಕಾರಣವಾಗಿದ್ದ ಇಂಡೋನೇಷ್ಯಾದ ಭೀಕರ ಸುನಾಮಿಗೆ ಗುರುವಾರ 20 ವರ್ಷ ತುಂಬಿದ್ದು, ಆಚೆ ಪ್ರಾಂತ್ಯದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಸೇರಿದ ನೂರಾರು ಮಂದಿ ಶೋಕಾಚರಣೆ ನಡೆಸಿದರು. ತಮ್ಮವರ ನೆನೆದು ಕಣ್ಣೀರು ಸುರಿಸಿದರು.
ಸುನಾಮಿಯಲ್ಲಿ ಮೃತಪಟ್ಟ 14 ಸಾವಿರಕ್ಕೂ ಅಧಿಕ ಗುರುತು ಹಿಡಿಯಲಾಗದ ಜನರನ್ನು ಹೂಳಲಾದ ಲೀ ಲೇಹೆ ಗ್ರಾಮದ ಸ್ಮಶಾನದಲ್ಲಿಯೂ ಜನ ತಮ್ಮನವರ ನೆನಪಿನಲ್ಲಿ ಕಣ್ಣೀರಾದರು. ಬಂಡ ಆಚೆಯಲ್ಲಿರುವ ಹಲವಾರು ಸ್ಮಶಾನಗಳಲ್ಲಿ ಶೋಕಾಚರಣೆ ನಡೆಯಿತು. ಸುನಾಮಿಯಲ್ಲಿ ಈ ಪ್ರಾಂತ್ಯ ಹೆಚ್ಚು ಹಾನಿಗೀಡಾಗಿತ್ತು.
2004ರ ಡಿ.26ರಂದು ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಸಂಭವಿಸಿದ 9.1 ತೀವ್ರತೆಯ ಭೂಕಂಪನ ಸೃಷ್ಠಿಸಿದ್ದ ಸುನಾಮಿಯು 12ಕ್ಕೂ ಅಧಿಕ ದೇಶಗಳಲ್ಲಿ 2.30 ಲಕ್ಷ ಮಂದಿಯ ಪ್ರಾಣವನ್ನು ಆಹುತಿ ಪಡೆದುಕೊಂಡಿತ್ತು. ಪಶ್ಚಿಮ ಆಫ್ರಿಕಾವರೆಗೂ ಈ ಸುನಾಮಿಯ ವ್ಯಾಪ್ತಿ ಆವರಿಸಿತ್ತು. ಆಕಾಶಚುಂಬಿ ಕಟ್ಟಡಗಳು ನೆಲಸಮವಾಗಿದ್ದವು.
ಅಂದು ಮುನಿಸಿಕೊಂಡಿದ್ದ ಹಿಂದೂ ಮಹಾಸಾಗರ ಇಂಡೋನೇಷ್ಯಾವನ್ನು ಸ್ಮಶಾನಭೂಮಿಯನ್ನಾಗಿ ಪರಿವರ್ತನೆ ಮಾಡಿತ್ತು. ಈ ಘಟನೆ ಆಧುನಿಕ ಜಗತ್ತಿನ ಅತಿ ಭೀಕರ ಪ್ರಾಕೃತಿಕ ವಿಕೋಪ ಎಂದು ಗುರುತಿಸಲ್ಪಟ್ಟಿದೆ.
ಸುನಾಮಿಯಿಂದ 17 ಲಕ್ಷ ಮಂದಿ ನಿರಾಶ್ರಿತರಾದರು. ಇಂಡೋನೇಷ್ಯಾ, ಶ್ರೀಲಂಕಾ, ಭಾರತ ಹಾಗೂ ಥಾಯ್ಲೆಂಡ್ ಸುನಾಮಿಯ ಹೊಡೆತಕ್ಕೆ ನಲುಗಿದ್ದವು. ಇಂಡೋನೇಷ್ಯಾ ಒಂದರಲ್ಲೆ 1.7 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.
ಘಟನೆ ನಡೆದು 20 ವರ್ಷ ಕಳೆದರೂ ತಮ್ಮವವನ್ನು ಕಳೆದುಕೊಂಡವರ ದುಃಖ ಜನರಲ್ಲಿ ಹಾಗೇ ಇದೆ. ಗುರುವಾರ ಸ್ಮಶಾನಗಳಲ್ಲಿ ನಡೆದ ಶೋಕಾಚರಣೆ ಅದರ ಪ್ರತಿಬಿಂಬದಂತೆ ಕಂಡವು.