ನಾವು ಬೆಳಗ್ಗೆ ಎದ್ದ ತಕ್ಷಣವೇ ಕಾಫಿ ಟೀ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಬಹುತೇಕ ಎಲ್ಲೂ ಈ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಒಂದು ದಿನ ಅವರು ಕುಡಿಯಲಿಲ್ಲ ಅಂದರೆ ಪ್ರಪಂಚವೇ ತಲೆ ಬೇಲೆ ಬಿದ್ದಿರುವ ಹಾಗೆ ಆಡುತ್ತಾರೆ. ಕೆಲವರು ಮಾತ್ರ ಬೆಡ್ ಕಾಫಿ ಕೂಡ ಸವಿಯುತ್ತಾರೆ. ಹಾಗೆ ಎದ್ದ ಕೂಡಲೇ ನೀರು ಕುಡಿದು ದಿನ ಆರಂಭಿಸುವವರು ಕೂಡ ಇದ್ದಾರೆ.
ಕೆಲವರಂತು ಅವರ ಇಷ್ಟದ ಕಾಫಿ ಟೀ ರೆಡಿಯಾಗಿದೆ ಎಂದು ತಿಳಿದ ಮೇಲಷ್ಟೇ ಹಾಸಿಗೆಯಿಂದ ಎದ್ದು ಬರುತ್ತಾರೆ. ಕಾಫಿ ಟೀಗೆ ಅಷ್ಟೊಂದು ದಾಸರಾಗಿಬಿಟ್ಟಿರುತ್ತಾರೆ. ಟೀ ಕುಡಿದ ತಕ್ಷಣ ನಿಮ್ಮಲ್ಲಿ ಒಂದು ಬಲ ಬಂದಂತೆ ಅನಿಸುತ್ತದೆ, ಚೈತನ್ಯ ಮೂಡುತ್ತದೆ. ಏಕೆಂದರೆ ಅದರಲ್ಲಿರುವ ಕೆಫೀನ್ ಅಂಶವು ನಿಮ್ಮ ರಕ್ತದಲ್ಲಿ ಸೇರಿದಾಗ ದೇಹಕ್ಕೆ ಒಂದು ಚೈತನ್ಯ ಬಂದಿರುವ ಅನುಭವವಾಗುತ್ತೆ.
ಆದ್ರೆ ಕಾಫಿ ನಿಮ್ಮ ದೇಹದೊಳಗೆ ಹೋದ 20 ನಿಮಿಷದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದನ್ನು ತಿಳಿದಿದ್ದೀರಾ? ಭಾರತದಲ್ಲಿ ವಾರ್ಷಿಕವಾಗಿ ಪ್ರತಿ ವ್ಯಕ್ತಿ ಸರಾಸರಿ 30 ಕಪ್ ಕಾಫಿ ಸವಿಯುತ್ತಾನಂತೆ. ಬ್ರಿಟಿಷ್ ಕಾಫಿ ಅಸೋಸಿಯೇಷನ್ ಪ್ರಕಾರ, ಯುಕೆಯಂತಹ ದೇಶಗಳಲ್ಲಿ ಕಾಫಿ ಸಂಸ್ಕೃತಿಯು ಹೆಚ್ಚು ಅಭ್ಯಾಸ ಮಾಡುವ ಹಾಗೂ ಸವಿಯುವ ಜನರಿದ್ದಾರೆ. ಅಲ್ಲಿ ಪ್ರತಿದಿನ ಸುಮಾರು 95 ಮಿಲಿಯನ್ ಕಪ್ ಕಾಫಿ ಸವಿಯಲಾಗುತ್ತದೆ.
ಕಾಫಿಯ ಮೊದಲ ಸಿಪ್ ನಂತರ ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಇದು ಆರಂಭಿಕ ಪ್ರಭಾವ ಬೀರಲು ಮುಂದಾಗುತ್ತದೆ. ಕಿಂಗ್ಸ್ ಕಾಲೇಜ್ ಲಂಡನ್‌ನ ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿಯ ಪ್ರಾಧ್ಯಾಪಕ ಥಾಮಸ್ ಸ್ಯಾಂಡರ್ಸ್ ಪ್ರಕಾರ, ಕಾಫಿಯ ಪರಿಣಾಮಗಳನ್ನು ಅನುಭವಿಸಲು, ನೀವು ಅದನ್ನು ರಕ್ತಪ್ರವಾಹಕ್ಕೆ ಹೀರಿಕೊಳ್ಳಲು ಬಿಡಬೇಕು. ಈ ಹಂತದಲ್ಲಿ ನೀವು ಏನನ್ನು ಅನುಭವಿಸುತ್ತಿದ್ದೀರಿ ಎಂಬುದು ಕೇವಲ ಮಾನಸಿಕ ಪರಿಣಾಮವಾಗಿದೆ ಎಂದು ಅವರು ಹೇಳುತ್ತಾರೆ.
ಕಾಫಿಯಲ್ಲಿರುವ ಕೆಫೀನ್ ಅಂಶವನ್ನು ನಮ್ಮ ದೇಹ ಪತ್ತೆ ಮಾಡಿ ಹೀರಿಕೊಳ್ಳಲು ಸುಮಾರು 20 ನಿಮಿಷ ಹಿಡಿಯಲಿದೆ. ಒಮ್ಮೆ ಹೀರಿಕೊಂಡ ಬಳಿಕ ಅದು ನಮ್ಮ ಹೃದಯ ಬಡಿತ ಹೆಚ್ಚಳ ಹಾಗೂ ಅಡ್ರಿನಾಲಿನ್ ಹೆಚ್ಚು ಬಿಡುಗಡೆಯಾಗಲು ಕಾರಣವಾಗುತ್ತದೆ.
ಹೃದಯ ಬಡಿತದ ಹೆಚ್ಚಳದ ನಂತರ, ಅಡ್ರಿನಾಲಿನ್ ಸ್ರಾವ ಹೆಚ್ಚಾಗುತ್ತದೆ. ಇದು ನಿಮ್ಮ ಚಟುವಟಿಕೆಗೆಳಿಗೆ ಸಂಬಂಧಿಸಿದ ಹಾರ್ಮೋನ್ ಆಗಿದೆ. ಇದರಿಂದ ನಿಮ್ಮ ಕಾರ್ಯ ಚಟುವಟಿಕೆ ಹೆಚ್ಚಾಗುತ್ತದೆ. ನೀವು ಎಷ್ಟು ಆಯಾಸಗೊಂಡಿದ್ದರು ಈ ಒಂದು ಕಪ್ ಕಾಫಿಯಲ್ಲಿರುವ ಕೆಫೀನ್ ಅಂಶ ನಿಮಗೆ ಮತ್ತೊಮ್ಮೆ ಕೆಲಸ ಮಾಡಲು ಶಕ್ತಿ ನೀಡಲಿದೆ.
ಆದರೆ ಕಾಫಿ ಕುಡಿದ 30 ನಿಮಿಷದ ಬಳಿಕ ನಿಮ್ಮಲ್ಲಿ ಮೂತ್ರ ವಿಸರ್ಜನೆಯ ಅಗತ್ಯತೆ ಹೆಚ್ಚಿಸಬಹುದು. ಕಾಫಿ ಮೂತ್ರವರ್ಧಕ ಗುಣ ಹೊಂದಿದೆ. ಹೀಗಾಗಿ ಮೂತ್ರಪಿಂಡ ಸಮಸ್ಯೆ ಇರುವವರು ಟೀ -ಕಾಫಿ ಸೇವನೆ ಕಡಿಮೆ ಮಾಡುವುದೇ ಉತ್ತಮ.
ಕೆಫೀನ್ ಕರುಳಿನ ಮೇಲೂ ಪರಿಣಾಮ ಬೀರುತ್ತದೆ. ಕಾಫಿ ಕುಡಿದ ನಂತರ ಸುಮಾರು 60-90 ನಿಮಿಷಗಳ ನಂತರ ಕೆಫೀನ್ ಕೊಲೊನ್ ಅನ್ನು ಉತ್ತೇಜಿಸುತ್ತದೆ, ಅದರ ಚಟುವಟಿಕೆಯನ್ನು ನೀರಿಗೆ ಹೋಲಿಸಿದರೆ ಶೇಕಡಾ 60 ರಷ್ಟು ಮತ್ತು ಡಿಕಾಫ್ ಕಾಫಿಗೆ ಹೋಲಿಸಿದರೆ ಶೇಕಡಾ 23 ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧನೆ ತೋರಿಸುತ್ತದೆ. ಇದು ಮಲ ವಿಸರ್ಜನೆಯ ಸ್ಟಿಮುಲೇಷನ್‌ಗೆ ಕಾರಣವಾಗಲಿದೆ.
ಕಾಫಿ ನಮ್ಮ ದೇಹದ ಮೇಲೆ ಸುಮಾರು 2ರಿಂದ 3 ಗಂಟೆಗಳ ಕಾಲ ತನ್ನ ಪ್ರಭಾವ ಉಂಟು ಮಾಡಬಹುದಂತೆ. ಹೀಗಾಗಿಯೇ ರಾತ್ರಿ ಹೊತ್ತು ಟೀ ಕಾಫಿ ಕುಡಿಯುವುದು ಉತ್ತಮ ಅಭ್ಯಾಸವಲ್ಲ ಎನ್ನಲಾಗುತ್ತದೆ. ರಾತ್ರಿ ನಿದ್ರೆ ಬಾರದೆ ಇರುವ ಸ್ಥಿತಿಗೆ ಇದು ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.