ಮಾವ್ : ದಶಕಗಳ ಹಿಂದೆ ₹2000 ಕೋಟಿಯಷ್ಟಿದ್ದ ಭಾರತದ ರಕ್ಷಣಾ ರಫ್ತು, ಪ್ರಸ್ತುತ ದಾಖಲೆಯ ₹21,000 ಕೋಟಿಗೆ ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ತಿಳಿಸಿದ್ದಾರೆ.
ಮಾವ್ ಸೇನಾ ದಂಡುನೆಲೆಯ ಆರ್ಮಿ ವಾರ್ ಕಾಲೇಜಿನ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಂಗ್ ಅವರು, 2029ರ ವೇಳೆಗೆ ₹50,000 ಕೋಟಿ ರಕ್ಷಣಾ ರಫ್ತು ಸಾಧಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಭವಿಷ್ಯದ ಸವಾಲುಗಳನ್ನು ಎದುರಿಸಲು ಸೈನಿಕರನ್ನು ಸಜ್ಜುಗೊಳಿಸುವಲ್ಲಿ ಸೇನಾ ತರಬೇತಿ ಕೇಂದ್ರಗಳ ಪಾತ್ರ ಮಹತ್ವದಾಗಿದೆ ಎಂದು ಸಿಂಗ್ ಹೇಳಿದರು.
ಭಾರತದಲ್ಲಿ ತಯಾರಾಗುತ್ತಿರುವ ಉಪಕರಣಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದರು.
ಬದಲಾಗುತ್ತಿರುವ ಯುದ್ಧದ ಸ್ವರೂಪಗಳ ಕುರಿತು ಮಾತನಾಡಿದ ಸಿಂಗ್, 'ಮಾಹಿತಿ ಯುದ್ಧ, ಕೃತಕ ಬುದ್ಧಿಮತ್ತೆ ಆಧಾರಿತ ಯುದ್ಧ, ಪರೋಕ್ಷ ಯುದ್ಧ ಮತ್ತು ಸೈಬರ್ ದಾಳಿಗಳು ಸೇರಿದಂತೆ ಅನೇಕ ಅಸಾಂಪ್ರದಾಯಿಕ ವಿಧಾನಗಳು ದೊಡ್ಡ ಸವಾಲುಗಳನ್ನು ಒಡ್ಡುತ್ತಿವೆ' ಎಂದು ಹೇಳಿದರು.