ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಮಂಡಲ ಪೂಜಾ ಮಹೋತ್ಸವಕ್ಕೆ ದಿನ ಸಮೀಪಿಸುತ್ತಿದ್ದಂತೆ ಭಕ್ತಾದಿಗಳ ದಟ್ಟಣೆ ಹೆಚ್ಚಾಗತೊಡಗಿದೆ. ಮಂಡಲ ಮಹೋತ್ಸವ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ತೊಡಿಸಲಿರುವ ಚಿನ್ನದ ಅಂಗಿ(ತಂಗ ಅಂಗಿ)ಘೋಷಯಾತ್ರೆ ಡಿ. 22ರಂದು ಬೆಳಗ್ಗೆ 7ಕ್ಕೆ ಆರನ್ಮುಳ ಶ್ರೀ ಪಾರ್ಥಸಾರಥೀ ದೇವಸ್ಥಾನದಿಂದ ಆರಂಭಗೊಳ್ಳಲಿದೆ. ವಿಶೇಷವಾಗಿ ಸಜ್ಜುಗೊಳಿಸಲಾದ ರಥದಲ್ಲಿ ತಂಗ ಅಂಗಿ ಘೋಷಯಾತ್ರೆ ಸಾಗಲಿದ್ದು, 25ರಂದು ಸಂಜೆ ದೀಪಾರಾಧನೆಗೂ ಮೊದಲು ಸನ್ನಿಧಾನ ತಲುಪಲಿರುವುದಾಗಿ ದೇವಸ್ವಂ ಬೋರ್ಡ್ ಅದಿಕಾರಿಗಳು ತಿಳಿಸಿದ್ದಾರೆ.
22ರಂದು ಆರಂಭಗೊಳ್ಳುವ ಘೋಷಯಾತ್ರೆ 75ಕೇಂದ್ರಗಳ ಮೂಲಕ ಸಾಘಿ ಸನ್ನಿದಾನ ತಲುಪಲಿದೆ. ಆರನ್ಮುಲ ಶ್ರೀ ಪಾರ್ಥಸಾರಥೀ ಕ್ಷೇತ್ರದಿಂದ ಸಾಗುವ ತಂಗ ಅಂಗಿ ಘೋಷಯಾತ್ರೆ ಓಮಲ್ಲೂರ್ ಶ್ರೀ ರಕ್ತಕಂಠ ಸ್ವಾಮಿ ದೇಗುಲ, 23ರಂದು ಸಂಜೆ ಕೋನ್ನಿ ಮುರಿಙಮಂಗಲಂ ಕ್ಷೇತ್ರ, 24ರಂದು ವೆರುನಾಡ್ ಶ್ರೀ ಶಾಸ್ತಾ ಕ್ಷೇತ್ರದಲ್ಲೂ ತಂಗಲಿದೆ. 25ರಂದು ಬೆಳಗ್ಗೆ ವೆರುನಾಡ್ ಶ್ರೀ ಶಾಸ್ತಾ ಕ್ಷೇತ್ರದಿಂದ ಹೊರಡುವ ಘೋಷಯಾತ್ರೆ ಮಧ್ಯಾಹ್ನ ಪಂಪೆಗೆ ತಲುಪಲಿದೆ. ಮಧ್ಯಾಹ್ನ 3ಕ್ಕೆ ಪಂಪೆಯಿಂದ ಹೊರಟು, ಸಂಜೆ 5ಕ್ಕೆ ಶರಂಗುತ್ತಿ ತಲುಪುವ ಘೋಷಯಾತ್ರೆಯನ್ನು ಆಚಾರಾನುಷ್ಠಾನಗಳೊಂದಿಗೆ ಸ್ವಾಗತಿಸಿ ಸನ್ನಿದಾನಕ್ಕೆ ತಲುಪಿಸಲಾಗುವುದು. ಘೋಷಯಾತ್ರೆ ತಲುಪುವ ಕೇಂದ್ರಗಳಲ್ಲಿ ತಂಗ ಅಂಗಿ ವೀಕ್ಷಣೆಗೆ ಭಕ್ತಾದಿಗಳಿಗೆ ಅವಕಾಶಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.