ನವದೆಹಲಿ: ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಬಾಂಗ್ಲಾದೇಶದಲ್ಲಿ ಈ ವರ್ಷ ಡಿ. 8ರವರೆಗೂ ಒಟ್ಟು 2,200 ಹಿಂಸಾಚಾರದ ಪ್ರಕರಣಗಳು ನಡೆದಿವೆ ಎಂದು ವರದಿಯಾಗಿದೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ವಿದೇಶಾಂಗ ಸಚಿವಾಲಯವು ಶುಕ್ರವಾರ ಸಲ್ಲಿಸಿದ ಲಿಖಿತ ಉತ್ತರದಲ್ಲಿ ಈ ಅಂಕಿ-ಅಂಶ ಉಲ್ಲೇಖವಾಗಿದೆ.
ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಢಾಕಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದು ಭಾರತದ ನಿರೀಕ್ಷೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಲಿಖಿತವಾಗಿ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ಅಲ್ಪಸಂಖ್ಯಾತರು ಮತ್ತು ಮಾನವ ಹಕ್ಕುಗಳ ಸಂಘಟನೆಗಳ ಅಂಕಿ-ಅಂಶವನ್ನು ಉಲ್ಲೇಖಿಸಿದ್ದಾರೆ.
ಪಾಕಿಸ್ತಾನದಲ್ಲಿ ಈ ವರ್ಷ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಪ್ರಕರಣಗಳ ಸಂಖ್ಯೆ ಅಕ್ಟೋಬರ್‌ವರೆಗೆ 112 ಎಂದು ಸಚಿವಾಲಯವು ತಿಳಿಸಿದೆ.
ಬಾಂಗ್ಲಾದೇಶದಲ್ಲಿ 2022ರಲ್ಲಿ 47 ಪ್ರಕರಣ ದಾಖಲಾಗಿದ್ದರೆ, ಪಾಕಿಸ್ತಾನದಲ್ಲಿ 241, 2023ರಲ್ಲಿ ಕ್ರಮವಾಗಿ 302, 103 ಪ್ರಕರಣ ದಾಖಲಾಗಿವೆ ಎಂದಿದೆ.