ಜರ್ಮನಿಯ ನಿಶ್ಚಲ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವಲ್ಲಿ ವಿಫಲರಾದ ವಿತ್ತ ಸಚಿವರನ್ನು ನ. 6ರಂದು ವಜಾಗೊಳಿಸಿದ ಬೆನ್ನಲ್ಲೇ ಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಇದಾದ ನಂತರ ವಿಶ್ವಾಸ ಮತ ಕೋರಿದ ಸ್ಕೋಲ್ಜ್ ಅವರಿಗೆ ಡಿ. 16ರಂದು ಪರಾಭವ ಉಂಟಾಗಿತ್ತು.
ಇದರ ಬೆನ್ನಲ್ಲೇ ಅಧ್ಯಕ್ಷ ಸ್ಟೀನ್‌ಮೀರ್ ಅವರು ಸಂಸತ್ ವಿಸರ್ಜಿಸಿದ್ದಾರೆ. ಬಹುತೇಕ ಪಕ್ಷಗಳ ಮುಖಂಡರು ಫೆ. 23ರಂದು ಚುನಾವಣೆ ನಡೆಸಲು ಒಮ್ಮತ ವ್ಯಕ್ತಪಡಿಸಿ ಬೆನ್ನಲ್ಲೇ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಪ್ರಸಕ್ತ ಸರ್ಕಾರದ ಅವಧಿಯು ಇನ್ನೂ ಏಳು ತಿಂಗಳು ಬಾಕಿ ಇದೆ.
2ನೇ ವಿಶ್ವ ಯುದ್ಧದ ನಂತರ ರಾಷ್ಟ್ರೀಯ ಸಂಸತ್ತು ತನ್ನಿಂತಾನೆ ವಿಸರ್ಜನೆಗೊಳ್ಳುವುದನ್ನು ಸಂವಿಧಾನ ಅನುಮತಿಸಿರಲಿಲ್ಲ. ಆದರೆ ಸ್ಟೀನ್‌ಮೀರ್ ಅವರು ಸಂಸತ್ ವಿಸರ್ಜಿಸಲು ನಿರ್ಧರಿಸಿ, ಚುನಾವಣೆ ಘೋಷಣೆ ಮಾಡಿದರು. ಇದಕ್ಕಾಗಿ ಅವರು 21 ದಿನಗಳನ್ನು ತೆಗೆದುಕೊಂಡರು. ಜರ್ಮನಿಯಲ್ಲಿ ಸಂಸತ್ ವಿಸರ್ಜನೆಗೊಂಡ 60 ದಿನಗಳ ಒಳಗಾಗಿ ಚುನಾವಣೆ ನಡೆಯಬೇಕು ಎಂಬ ನಿಯಮವಿದೆ.
ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾಗುವವರೆಗೂ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಸ್ಕೋಲ್ಜ್ ಅವರೇ ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.