ಮುಂಬೈ: ಪೊಲೀಸ್ ವಶದಲ್ಲಿದ್ದ ವೇಳೆ ಮೃತಪಟ್ಟಿದ್ದ ಕಾನೂನು ವಿದ್ಯಾರ್ಥಿ ಸೋಮನಾಥ ಸೂರ್ಯವಂಶಿ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಡಿಸೆಂಬರ್ 23ರಂದು ಮಹಾರಾಷ್ಟ್ರದ ಪರ್ಭಣಿಗೆ ತೆರಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪರ್ಭಣಿ ರೈಲು ನಿಲ್ದಾಣದ ಆವರಣದಲ್ಲಿ ಅಂಬೇಡ್ಕರ್ ಮೂರ್ತಿಯ ಬಳಿ ಇರಿಸಲಾಗಿದ್ದ ಸಂವಿಧಾನದ ಪ್ರತಿಕೃತಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದನ್ನು ಖಂಡಿಸಿ ಡಿಸೆಂಬರ್ 10ರಂದು ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು.
ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಲ್ಲಿ ಒಬ್ಬರಾದ ಸೂರ್ಯವಂಶಿ ಡಿಸೆಂಬರ್ 15ರಂದು ನ್ಯಾಯಾಂಗ ಬಂಧನದಲ್ಲಿ ಇದ್ದ ವೇಳೆ ಮೃತಪಟ್ಟಿದ್ದರು. ಸೂರ್ಯವಂಶಿ ಅವರು ವಾಡರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ರಾಹುಲ್ ಗಾಂಧಿ ಅವರೊಂದಿಗೆ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಮತ್ತು ಹಿರಿಯ ನಾಯಕ ವಿಜಯ್ ವಾಡೆಟ್ಟಿವಾರ್ ಅವರೂ ತೆರಳಲಿದ್ದಾರೆ ಎಂದು ತಿಳಿಸಿದೆ.
ದೆಹಲಿಯಿಂದ ನಾಂದೇಡ್‌ಗೆ ವಿಶೇಷ ವಿಮಾನದ ಮೂಲಕ ಆಗಮಿಸುವ ರಾಹುಲ್ ಗಾಂಧಿ ಅವರು ನೇರವಾಗಿ ಪರ್ಭಣಿಗೆ ತೆರಳಲಿದ್ದಾರೆ. ಸೂರ್ಯವಂಶಿ ಅವರ ಕುಟುಂಬವನ್ನು ಭೇಟಿಯಾದ ನಂತರ ದೆಹಲಿಗೆ ಮರಳಲಿದ್ದಾರೆ ಎಂದು ವರದಿಯಾಗಿದೆ.