ಕುಂಬಳೆ: ಮುಂಡಪಳ್ಳದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಲಿಯುಗದ ಆರಾಧ್ಯಮೂರ್ತಿ ಶ್ರೀವೆಂಕಟೇಶ್ವರ ಸ್ವಾಮಿ ಕಲ್ಯಾಣೋತ್ಸವ ಡಿ. 25ರಂದು ನಡೆಯಲಿದೆ, ತಿರುಪತಿಯ ದೇವರಿಗೆ ಕಲ್ಯಾಣೋತ್ಸವ ಸೇವೆಯು ಅತ್ಯಂತ ಪ್ರಿಯವಾದ ಸೇವೆ ಎಂದು ಪರಿಗಣಿಸಲಾಗಿದ್ದು, ಕಲ್ಯಾಣೋತ್ಸವ ವೀಕ್ಷಿಸುವ ಭಕ್ತಾದಿಗಳಿಗೆ ಬರುವ ಕಷ್ಟಕಾರ್ಪಣ್ಯಗಳು ದೂರವಾಗಿ ಮನದ ಇಷ್ಟಾರ್ಥಗಳು ಈಡೇರುವ ವಿಶ್ವಾಸ ಜನರಲ್ಲಿದೆ. ಬೆಂಗಳೂರಿನ ಶ್ರೀ ರಾಮಾನುಜ ಮಠದ ವೇದಮೂರ್ತಿ ಮೋಹನ ಕೃಷ್ಣ ಆಚಾರ್ಯ ಮತ್ತು ಸಹ ಆಚಾರ್ಯರ ನೇತೃತ್ವದಲ್ಲಿ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸಲು ದೇವಸ್ಥಾನದ ಆಡಳಿತ ಸಮಿತಿ ತೀರ್ಮಾನಿಸಿದೆ. ಸಮಾರಂಭದಲ್ಲಿ ಹತ್ತು ಸಾವಿರದಷ್ಟು ಭಕ್ತಾದಿಗಳು ಒಟ್ಟುಸೇರುವ ನಿರೀಕ್ಷೆಯಲ್ಲಿ ದೇವಸ್ಥಾನದ ಆಡಳಿತ ಸಮಿತಿ ಸಿದ್ಧತಾ ಕಾರ್ಯ ನಡೆಸಿದೆ.
ಬೆಳಗ್ಗೆ 7.30ರಿಂದ ಫಲಪಂಚಾಮೃತ ಅಭಿಷೇಕ, ನಿತ್ಯ ವಿಧಿ, ತಿರುಮಂಜನ ಸೇವೆ, 8.30ರಿಂದ ಕೋಮಲ ಸೇವೆ, ಪೀತಾಂಬರ ಸಮರ್ಪಣೆ 10.30ಕ್ಕೆ ತಿರುಪಾವಡಿ ಸೇವೆ, ಆರತಿ ತೀರ್ಥ, ಪ್ರಸಾದ ವಿತರಣೆ ಸಂಜೆ 4ಕ್ಕೆ ಗರುಡೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ ಮತ್ತು 7.30 ರಿಂದ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಪ್ರಸಾದ ವಿತರಣೆ ನಡೆಯಲಿದೆ.
ಈ ಸಂದರ್ಭ ನಾಡಿನಾದ್ಯಂತ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ನಡೆಯುವ ಸತ್ಕಾರ್ಯಗಳಿಗೆ ಮಹಾದಾನ ಮಾಡಿ ಸಮಾಜದ ಏಳಿಗೆಗೆ ನಿರಂತರ ಶ್ರಮಿಸುವ ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕಾತರಾದ ಮಹಾದಾನಿ ಸದಾಶಿವ ಶೆಟ್ಟಿ ಕುಳೂರುಕನ್ಯಾನ ಇವರನ್ನು ಸನ್ಮಾನಿಸಲಾಗುವುದು. ಡಾ. ಸತ್ಯಪ್ರಕಾಶ್ ಶೆಟ್ಟಿ ಮುಂಬೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದ ಸಂಘಟಕ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮುಕ್ತೇಸರ ಕೆ.ಕೆ ಶೆಟ್ಟಿ ಅವರು ಉಪಸ್ಥಿತರಿರುವರು.