ಬದಿಯಡ್ಕ: ಶಂಕರ ಧರ್ಬೆತ್ತಡ್ಕ ಅವರು ಮೌನ ಸಾಧಕ. ಸೋಲರಿಯದ ಸರದಾರ. ಯಾವುದೇ ರೀತಿಯ ಪ್ರಚಾರ ಬಯಸದೆ ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿದವರು. ಜನಪ್ರತಿನಿಧಿಯಾಗಿ ಅವರ ನಡಿಗೆ ಈಗ ಇಪ್ಪತ್ತೈದರ ಕಡೆಗೆ ಸಾಗುತ್ತಿದೆ. ಬದಿಯಡ್ಕಕ್ಕಂತೂ ಇದು ಅಭಿಮಾನದ ವಿಷಯ ಎಂಬುದಾಗಿ ಹಿರಿಯ ಕವಿ, ಗಡಿನಾಡ ಚೇತನ ಪ್ರಶಸ್ತಿ ಪುರಸ್ಕøತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಹೇಳಿದರು.
ಅಂಬೇಡ್ಕರ್ ವಿಚಾರವೇದಿಕೆ ಬಾರಡ್ಕದ ವತಿಯಿಂದ ಬಾರಡ್ಕದಲ್ಲಿ ಭಾನುವಾರ ನಡೆದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಾರಡ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಂಕರ ದರ್ಭೆತ್ತಡ್ಕ ಅವರು ಗ್ರಾಮಪಂಚಾಯತಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನೀಡುತ್ತಾ ಬಂದಿರುವ ಸಹಕಾರ ಮಾರ್ಗದರ್ಶನಗಳನ್ನು ಸ್ಮರಿಸಿದರು. ಮಧೂರು ಶ್ರೀ ಮದರುಮಹಾಮಾತೆ ಮೊಗೇರ ಸಮಾಜದ ಗೌರವಾಧ್ಯಕ್ಷ ಆನಂದ ಕೆ.ಮವ್ವಾರು, ಅಧ್ಯಕ್ಷ ವಸಂತ ಅಜಕ್ಕೋಡು, ರಾಮಪ್ಪ ಮಂಜೇಶ್ವರ, ಗಂಗಾಧರ ಗೋಳಿಯಡ್ಕ, ಹರಿಶ್ಚಂದ್ರ ಪುತ್ತಿಗೆ, ಚಂದ್ರಶೇಖರ, ಸುಭಾಷ್ ಪೆರ್ಲ, ಮಾಧವ ತೆಕ್ಕೆಕರೆ, ವಿಜಯವಿಕ್ರಮ್ ಶುಭಹಾರೈಸಿದರು.
ಶಂಕರ ದರ್ಬೆತ್ತಡ್ಕ ಅವರನ್ನು ಅಂಬೇಡ್ಕರ್ ವಿಚಾರ ವೇದಿಕೆಯ ವತಿಯಿಂದ ಶಾಲು ಹೊದೆಸಿ, ಸ್ಮರಣಿಕೆ ಫಲಪುಷ್ಪ ನೀಡಿ ಅಭಿನಂದಿಸಲಾಯಿತು. ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಅಭಿನಂದನ ಭಾಷಣಗೈದು, ಶಂಕರ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದರು. ಸನ್ಮಾನವನ್ನು ಸ್ವೀಕರಿಸಿ ಶಂಕರ ದರ್ಬೆತ್ತಡ್ಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೇರಳ ರಾಜ್ಯೋದಯ ಜಿಲ್ಲಾ ಸನ್ಮಾನ ಸ್ವೀಕರಿಸಿದ ಕವಿ, ಸಂಘಟಕ ಸುಂದರ ಬಾರಡ್ಕ ಅವರನ್ನೂ ಅಭಿನಂದಿಸಲಾಯಿತು. ವೇದಿಕೆಯ ಅಧ್ಯಕ್ಷ ರಾಮಪಟ್ಟಾಜೆ ನಿರೂಪಿಸಿದರು.