ನವದೆಹಲಿ: 'ವಿಶ್ವವನ್ನು 2030ರ ಒಳಗೆ ಕ್ಷಯರೋಗ ಮುಕ್ತ ಮಾಡಬೇಕು ಎಂದು ವಿಶ್ವಸಂಸ್ಥೆ ನಿಗದಿ ಮಾಡಿರುವ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಭಾರತವು ಐದು ವರ್ಷಗಳ ಮೊದಲೇ ಸಾಧಿಸಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಹೇಳಿದ್ದರು. 2025ಕ್ಕೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇರುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಅಭಿಯಾನವೊಂದನ್ನು ಆರಂಭಿಸಿದೆ.
ಕ್ಷಯರೋಗ ತಗುಲುವ ಅಪಾಯ ಹೆಚ್ಚಿರುವ ಸುಮಾರು 25 ಕೋಟಿ ಜನರನ್ನು ಪತ್ತೆ ಮಾಡುವ ಅಭಿಯಾನವನ್ನು ಕೇಂದ್ರ ಸರ್ಕಾರ ಶನಿವಾರ ಆರಂಭಿಸಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳೂ ಸೇರಿದಂತೆ ದೇಶದ 347 ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಸಲು ಕೇಂದ್ರ ಮುಂದಾಗಿದೆ.
ಕ್ಷಯರೋಗ ಚಿಕಿತ್ಸೆ ಅಪೂರ್ಣಗೊಂಡವರು, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು, ಧೂಮಪಾನ ಮಾಡುವವರು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಹಾಗೂ ವಯಸ್ಕರು, 60 ವರ್ಷ ಮೇಲ್ಪಟ್ಟವರು, ಎಚ್‌ಐವಿ ಸೋಂಕಿತರು ಈ 25 ಕೋಟಿ ಜನರಲ್ಲಿ ಸೇರಿದ್ದಾರೆ.
ಇವರನ್ನು ಪತ್ತೆ ಹಚ್ಚಿ, ಚಿಕಿತ್ಸೆ ಕೊಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಚಿಕಿತ್ಸಾ ಉಪಕರಣಗಳು, ಕೃತಕ ಬುದ್ಧಿಮತ್ತೆ ಚಾಲಿತ ಎಕ್ಸ್-ರೇ ಉಪಕರಣಗಳೊಂದಿಗೆ ಸಂಚಾರಿ ಕ್ಷಯರೋಗಾಣು ಪತ್ತೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮನೆ ಮನೆಗೆ ತೆರಳಿ ಈ ಅಭಿಯಾನ ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.