ನವದೆಹಲಿ: ₹2,800 ಕೋಟಿ ಮೊತ್ತದ ಚಿಟ್‌ಫಂಡ್ ಹಗರಣದ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತದಲ್ಲಿ ತಂದೆ-ಮಗನನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಶುಕ್ರವಾರ ತಿಳಿಸಿದೆ.
ಪ್ರಯಾಗ್ ಗ್ರೂಪ್ ಆಫ್ ಕಂಪನಿಯ ಪ್ರವರ್ತಕರಾದ ಬಸುದೇವ್ ಬಾಗ್ಚಿ ಹಾಗೂ ಅವರ ಪುತ್ರ ಅವಿಕ್ ಬಾಗ್ಚಿಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಇ.ಡಿ ಬಂಧಿಸಿದೆ.
ನ್ಯಾಯಾಲಯವು ಇವರನ್ನು10 ದಿನ ಇ.ಡಿ ವಶಕ್ಕೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
ಮುಂಬೈ ಹಾಗೂ ಕೋಲ್ಕತ್ತದಲ್ಲಿರುವ ಆರೋಪಿಗಳಿಗೆ ಸೇರಿದ ಕೆಲವು ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳ ತಂಡವು ನ.26ರಂದು ಶೋಧ ನಡೆಸಿತ್ತು.
ಹೆಚ್ಚಿನ ಲಾಭದ ಆಮಿಷವೊಡ್ಡಿ ಆರೋಪಿಗಳು ಜನರಿಂದ ₹2,800 ಕೋಟಿ ಸಂಗ್ರಹಿಸಿದ್ದರು. ₹1,900 ಕೋಟಿ ಮೊತ್ತವನ್ನು ಹೂಡಿಕೆದಾರರಿಗೆ ಮರುಪಾವತಿಸದೆ ವಂಚಿಸಿದ್ದಾರೆ ಎಂದು ಇ.ಡಿ ಹೇಳಿದೆ.
ಪ್ರಯಾಗ್ ಗ್ರೂಪ್ ಆಫ್ ಕಂಪನಿಯು ಆರ್‌ಬಿಐ, ಸೆಬಿಯಿಂದ ಅನುಮತಿ ಪಡೆಯದೆ ಹಲವು ರಾಜ್ಯಗಳಲ್ಲಿ ಅಕ್ರಮವಾಗಿ ವಹಿವಾಟು ನಡೆಸಿದ ಆರೋಪ ಎದುರಿಸುತ್ತಿದೆ.