ಕಾಸರಗೋಡು: ಪೆರಿಯ ಅವಳಿ ಕೊಲೆ ಪ್ರಕರಣದ ತೀರ್ಪನ್ನು ಎರ್ನಾಕುಳಂ ಸಿಬಿಐ ನ್ಯಾಯಾಲಯವು ಡಿಸೆಂಬರ್ 28 ರಂದು ಪ್ರಕಟಿಸಲಿದೆ. ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿಯ ವಿಶೇಷ ಸಿಬಿಐ ನ್ಯಾಯಾಲಯವು ಈ ತಿಂಗಳ 28 ರಂದು ತನ್ನ ತೀರ್ಪು ಪ್ರಕಟಿಸಲಿದೆ.
ಸಿಪಿಎಂ ನಾಯಕರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಪಿ. ಪೀತಾಂಬರನ್ ಪ್ರಕರಣದ ಮೊದಲ ಆರೋಪಿ. ಸಿಪಿಎಂ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಹಾಗೂ ಮಾಜಿ ಶಾಸಕ ಕೆ.ವಿ.ಕುಂಞÂ್ಞ ರಾಮನ್ 20ನೇ ಆರೋಪಿ. ಒಟ್ಟು 24 ಆರೋಪಿಗಳಿದ್ದ ಪ್ರಕರಣದಲ್ಲಿ 270 ಸಾಕ್ಷಿಗಳಿದ್ದರು.
ಫೆಬ್ರವರಿ 17, 2019 ರಂದು ಕೊಲೆ ನಡೆದಿತ್ತು. ಕಾಸರಗೋಡು ಕಲ್ಯೋಟ್ ನಲ್ಲಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಎಂಬುವರು ಸಾವನ್ನಪ್ಪಿದ್ದರು. ಬೈಕ್ ನಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನೂ ಹೊಂಚು ಹಾಕಿದ್ದ ತಂಡ ಕೊಲೆಗೈದಿತ್ತು. ಕೃಪೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶರತ್ ಲಾಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು.
ಮೊದಲ ಆರೋಪಿ ಸಿಪಿಎಂ ಸ್ಥಳೀಯ ಸಮಿತಿ ಸದಸ್ಯ ಪೀತಾಂಬರನ್ ಕೊಲೆಗೆ ಯೋಜನೆ ರೂಪಿಸಿದ್ದ ಎಂದು ಕ್ರೈಂ ಬ್ರಾಂಚ್ ಪತ್ತೆ ಮಾಡಿದೆ. ಘಟನೆಯಲ್ಲಿ ನೇರವಾಗಿ ಭಾಗವಹಿಸಿದ್ದ 12 ಮಂದಿಯನ್ನು ಹೊರತುಪಡಿಸಿ ಸಿಪಿಎಂ ಉದುಮ ಏರಿಯಾ ಕಾರ್ಯದರ್ಶಿ ಕೆ.ಎಂ.ಮಣಿಕಂಠನ್ ಮತ್ತು ಪೆರಿಯ ಸ್ಥಳೀಯ ಕಾರ್ಯದರ್ಶಿ ಬಾಲಕೃಷ್ಣನ್ ವಿರುದ್ಧ ಅಪರಾಧ ವಿಭಾಗದ ಪೋಲೀಸರು ಆರೋಪ ಹೊರಿಸಿದ್ದಾರೆ. ಆದರೆ, ಹೈಕೋರ್ಟ್ ಏಕ ಪೀಠ ಪ್ರಕರಣವನ್ನು 2019ರ ಸೆಪ್ಟೆಂಬರ್ 30ರಂದು ಸಿಬಿಐಗೆ ಹಸ್ತಾಂತರಿಸಿತ್ತು.
ಡಿವೈಎಸ್ಪಿ ಅನಂತಕೃಷ್ಣನ್ ನೇತೃತ್ವದ ಸಿಬಿಐ ತಂಡ ತನಿಖೆ ನಡೆಸಿದೆ. ಬಂಧಿತ ಮೊದಲ 14 ಜನರಲ್ಲಿ ಕೆ. ಮಣಿಕಂಠನ್, ಎನ್. ಬಾಲಕೃಷ್ಣನ್ ಮತ್ತು ಅಳಕೋಡ್ ಮಣಿ ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು. ಉಳಿದ 11 ಮಂದಿ ವಿಯ್ಯೂರು ಕೇಂದ್ರ ಕಾರಾಗೃಹದಲ್ಲಿದ್ದಾರೆ.