ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆ ಸನಿಹದ ಪೂಚಕ್ಕಾಡ್ ನಿವಾಸಿ, ಅನಿವಾಸಿ ಭಾರತೀಯ ಎಂ.ಸಿ ಅಬ್ದುಲ್ ಗಫೂರ್ ಹಾಜಿ (55)ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಪೊಲೀಸರ ತಂಡ ಆರೋಪಿಗಳು ದೋಚಿರುವ ಚಿನ್ನದಲ್ಲಿ 29ಪವನು ಚಿನ್ನವನ್ನು ಕಾಸರಗೋಡಿನ ಹೊಸ ಬಸ್ ನಿಲ್ದಾಣ ವಠಾರದ ಚಿನ್ನಾಭರಣ ಅಂಗಡಿಯಿಂದ ವಶಪಡಿಸಿಕೊಳ್ಳಲಾಗಿದೆ. ಒಟ್ಟು 596ಪವನು(4.76ಕಿ.ಗ್ರಾಂ) ಚಿನ್ನ ದೋಚಲಾಗಿತ್ತು. ದೋಚಿದ ಚಿನ್ನವನ್ನು ಕಾಸರಗೋಡಿನ ಇತರ ಕೆಲವು ಅಂಗಡಿಗಳಿಗೆ ಮಾರಾಟಮಾಡಿರುವ ಬಗ್ಗೆ ಆರೋಪಿಗಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಕ್ರೈಂ ಬ್ರಾಂಚ್ ಅಧಿಖಾರಿಗಳು ಆರೋಪಿಗಳನ್ನು ಖುದ್ದು ಕರೆತಂದು ಚಿನ್ನ ವಶಪಡಿಸಿಕೊಳ್ಳುತ್ತಿದ್ದಾರೆ.
ಅಬ್ದುಲ್ ಗಫೂರ್ ಹಾಜಿ ಅವರ ಮೃತದೇಹ 2023 ಏ. 14ರಂದು ಮನೆಯೊಳಗೆ ನಿಗೂಢವಾಗಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಕುಳಿಕುನ್ನುವಿನ ಮಹಿಳಾ ಮಂತ್ರವಾದಿ ಶಮೀಮಾ ಯಾನೆ ಜಿನ್ನುಮ್ಮ (38), ಪತಿ ಉಬೈದ್ (40), ಪೂಚಕ್ಕಾಡ್ ನಿವಾಸಿ ಅನ್ಸಿಫಾ (34) ಮತ್ತು ಮಧೂರಿನ ಆಯಿಷಾ (40) ಎಂಬವರನ್ನು ಬಂಧಿಸಲಾಗಿದೆ. ಕೊಲೆ ನಡೆದ ದಿನ ಮನೆಯೊಳಗೆ ಮಂತ್ರವಾದ ನಡೆಸಿರುವ ಕುರುಹು ಪತ್ತೆಯಾಗಿದ್ದು, ಬ್ದುಲ್ ಗಫೂರ್ ಹಾಜಿ ಅವರ ತಲೆಯನ್ನು ಗೋಡೆಗೆ ಬಡಿದು ಕೊಲೆ ನಡೆಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಸ್ಥಳೀಯ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣವನ್ನು ಕ್ರಿಯಾಸಮಿತಿ ಹಾಗೂ ನಾಗರಿಕರ ಆಗ್ರಹದ ಹಿನ್ನೆಲೆಯಲ್ಲಿ ಕ್ರೈಂ ಬ್ರಾಂಚ್ ತನಿಖೆಗೆ ವಹಿಸಿಕೊಡಲಾಗಿದೆ.