ಜಬಲ್ಪುರ: ಟಿಕೆಟ್ ಕೊಳ್ಳಲು ಹಣವಿಲ್ಲ ಎಂದು ಇಲ್ಲೊಬ್ಬ ಆಸಾಮಿ ರೈಲಿನ ಚಕ್ರಗಳ ನಡುವೆ ಅವಿತು ಬರೊಬ್ಬರಿ 290ಕಿ.ಮೀ ವರೆಗೂ ಪ್ರಯಾಣಿಸಿರುವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಜಬಲ್ಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ದಾನಪುರ ಎಕ್ಸ್‌ಪ್ರೆಸ್‌ನ ರೈಲಿನ ಕೆಳಗಿನಿಂದ ಹೊರಬರುತ್ತಿರುವ ವ್ಯಕ್ತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ ರೈಲು ಟಿಕೆಟ್ ಕೊಳ್ಳಲು ಹಣವಿಲ್ಲದೇ ಈತ ರೈಲಿನ ಕೆಳಗೆ ಅವಿತು ಬರೊಬ್ಬರಿ ಸುಮಾರು 290 ಕಿ.ಮೀ ವರೆಗೂ ಪ್ರಯಾಣಿಸಿದ್ದಾನೆ ಎನ್ನಲಾಗಿದೆ. ಈತ ಮಧ್ಯಪ್ರದೇಶದ ಇಟಾರ್ಸಿಯಿಂದ ಜಬಲ್‌ಪುರದವರೆಗೆ (290 ಕಿಮೀ) ರೈಲಿನ ಬೋಗಿಯ ಕೆಳಗೆ, ಚಕ್ರಗಳ ನಡುವೆ ಅಡಗಿ ಕುಳಿತುಕೊಂಡು ಪ್ರಯಾಣಿಸಿರುವುದು ತನಿಖೆಯ ವೇಳೆ ತಿಳಿದುಬಂದಿದೆ.
ಜಬಲ್ಪುರ ರೈಲು ನಿಲ್ದಾಣದ ಬಳಿ ರೋಲಿಂಗ್ ಪರೀಕ್ಷೆಯ ಸಮಯದಲ್ಲಿ ರೈಲಿನ ಸಿಬ್ಬಂದಿ S4 ಕೋಚ್ ಅಡಿಯಲ್ಲಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಅಡಗಿರುವುದು ತಿಳಿಬಂದಿದೆ. ಆಘಾತಕ್ಕೊಳಗಾದ ನೌಕರರು ಕೂಡಲೇ ಸ್ಥಳಕ್ಕೆ ಆರ್‌ಪಿಎಫ್‌ಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಆರ್ ಪಿಎಫ್ ಸಿಬ್ಬಂದಿ ಆತನನ್ನು ಹೊರ ಬರುವಂತೆ ಹೇಳಿದ್ದಾರೆ. ಬಳಿಕ ಈ ವ್ಯಕ್ತಿ ನಿಧಾನವಾಗಿ ರೈಲಿನಡಿಯಿಂದ ಹೊರಬಂದಿದ್ದಾನೆ.
ಮಧ್ಯದ ಅಮಲು, ರೈಲಿನಡಿಯಲ್ಲೇ ಗಂಟೆಗಳ ಕಾಲ ನಿದ್ರೆ!
ಹೊರಗೆ ಬಂದ ಈತನನ್ನು ಸಿಬ್ಬಂದಿ ಪರೀಕ್ಷಹಿಸಿದ್ದು, ಈ ವೇಳೆ ಈತ ಮಧ್ಯಪಾನ ಮಾಡಿದ್ದ ವಿಚಾರ ತಿಳಿದಿದೆ. ಈ ಬಗ್ಗೆ ಕೇಳಿದಾಗ ಆತ ರೈಲಿನ ಕೆಳಗೆ ನಿದ್ರೆ ಮಾಡಿದ್ದೆ ಎಂದು ಹೇಳಿದ್ದಾನೆ. ಈ ವ್ಯಕ್ತಿ ಎಲ್ಲಿಂದ ಬಂದವನು ಅಥವಾ ರೈಲಿನ ಟ್ರಾಲಿಯನ್ನು ಹೇಗೆ ಪ್ರವೇಶಿಸಿದನು ಎಂಬುದು ಸ್ಪಷ್ಟವಾಗಿಲ್ಲ.
ಆದರೆ ಈತನ ಹಾವಭಾವಗಳನ್ನು ನೋಡಿದರೆ ಈತ ಮಾನಸಿಕ ಖಾಯಿಲೆಯಿಂದ ಬಳಲುತ್ತಿರಬಹುದು ಎಂದು ಸಿಬ್ಬಂದಿ ಶಂಕಿಸಿದ್ದಾರೆ. ಪ್ರಸ್ತುತ ಈತನನ್ನು ರೈಲ್ವೇ ರಕ್ಷಣಾ ಪಡೆ ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.