ದೀರ್ ಅಲ್-ಬಲಾಹ್: ಗಾಜಾ ಪಟ್ಟಿಯ ಮೇಲೆ ಮಂಗಳವಾರ ರಾತ್ರಿ ಮತ್ತು ಬುಧವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ 29 ಜನ ಮೃತಟ್ಟಿದ್ದಾರೆ.
ಗಾಜಾ ಗಡಿಭಾಗದಲ್ಲಿರುವ ಬೈತ್ ಲಹಿಯಾ ನಗರದಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ನಸೀರತ್ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 7 ಮಂದಿ ಸಾವಿಗೀಡಾಗಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
'ಆಸ್ಪತ್ರೆಯ ಪ್ರವೇಶ ದ್ವಾರದ ಬಳಿ ಸಂಭವಿಸಿದ ದಾಳಿಯಲ್ಲಿ ಒಬ್ಬ ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳು ಸೇರಿದಂತೆ ಒಟ್ಟು ಮೂವರು ಮೃತಪಟ್ಟಿದ್ದಾರೆ' ಎಂದು ಕಮಲ್ ಅದ್ವನ್ ಆಸ್ಪತ್ರೆ ಹೇಳಿದೆ.
ದಾಳಿಯ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾಗರಿಕರಿಗೆ ಹಾನಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಬಂಡುಕೋರರು ಜನರ ನಡುವೆ ಅವಿತುಕೊಂಡು ಅವರ ಜೀವಕ್ಕೆ ಸಂಚಕಾರ ತರುತ್ತಿದ್ದಾರೆ ಎಂದು ಇಸ್ರೇಲ್ ಪದೇ ಪದೇ ಹೇಳುತ್ತಿದೆ.
ಬಂಡುಕೋರರು ಬುಧವಾರ ಇಸ್ರೇಲ್ ಕಡೆಗೆ ನಾಲ್ಕು ರಾಕೆಟ್‌ಗಳನ್ನು ಹಾರಿಸಿದ್ದಾರೆ ಅದರಲ್ಲಿ ಎರಡನ್ನು ಹೊಡೆದುರುಳಿಸಲಾಗಿದೆ. ಇನ್ನೆರಡು ರಾಕೆಟ್‌ಗಳು ಖಾಲಿ ಜಾಗಕ್ಕೆ ಬಿದ್ದಿದ್ದು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಬೈರೂತ್ ವರದಿ: ಲೆಬನಾನ್‌ನ ದಕ್ಷಿಣದಲ್ಲಿರುವ ಪಟ್ಟಣವೊಂದರ ಮೇಲೆ ಇಸ್ರೇಲ್ ಪಡೆಗಳು ಡ್ರೋನ್ ಮೂಲಕ ಬುಧವಾರ ನಡೆಸಿದ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ.