ಜರುಸಲೇಂ (AP): ಉತ್ತರ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್‌ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ನಾಲ್ವರು ವೈದ್ಯಕೀಯ ಸಿಬ್ಬಂದಿ ಸೇರಿ ಕನಿಷ್ಠ 29 ಮಂದಿ ಮೃತಪಟ್ಟಿದ್ದಾರೆ.
ಕಮಲ್ ಅದ್ವಾನ್ ಆಸ್ಪತ್ರೆ ಗುರಿಯಾಗಿಸಿ ದಾಳಿ ನಡೆದಿದೆ. ಆಸ್ಪತ್ರೆಯ ಒಳಗೆ, ಹೊರಗಿನ ಸ್ಥಿತಿ ಘೋರವಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಹಸಮ್ ಅಬು ಸಫಿಯಾ ತಿಳಿಸಿದ್ದಾರೆ.
ಮೃತರಲ್ಲಿ ಐವರು ಮಕ್ಕಳು ಮತ್ತು ಐವರು ಮಹಿಳೆಯರು ಸೇರಿದ್ದಾರೆ ಎಂದು ಆಸ್ಪತ್ರೆಯು ಮಾಹಿತಿ ಆಧರಿಸಿ ಎಂದು ಪ್ಯಾಲೆಸ್ಟೀನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಸೇನೆ ಆಸ್ಪತ್ರೆ ಒಳಗಿನಿಂದಲೇ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಆರೋಪವನ್ನು ಇಸ್ರೇಲ್ ಸೇನೆಯು ಅಲ್ಲಗಳೆದಿದೆ.
'ರೋಗಿಗಳು, ವೈದ್ಯ ಸಿಬ್ಬಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸೇರಿ ಕಾರ್ಯನಿರ್ವಹಿಸಲಾಗುತ್ತಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಜಾ ಪಟ್ಟಿಯಲ್ಲಿ ಇಸ್ರೇಲ್ ದಾಳಿ ಆರಂಭಿಸಿದ ನಂತರ ಕಮಲ್ ಅದ್ವಾನ್ ಆಸ್ಪತ್ರೆ ಮೇಲೆ ಈ ಹಿಂದೆಯೇ ಹಲವು ಬಾರಿ ದಾಳಿ ನಡೆದಿದ್ದು, ಭಾಗಶಃ ಹಾನಿಗೀಡಾಗಿತ್ತು.
ಉತ್ತರ ಗಾಜಾದ ಕಮಲ್ ಅದ್ವಾನ್ ಆಸ್ಪತ್ರೆಯ ಮೇಲೆ ದಾಳಿ ನಡೆದ ನಂತರ ಅವಶೇಷಗಳಡಿ ಮೃತದೇಹಗಳು ಬಿದ್ದಿದ್ದವು -ಎಎಫ್‌ಪಿ ಚಿತ್ರ
ಇಸ್ರೇಲ್ ದಾಳಿ ನಿಲ್ಲಿಸಲಿ: ಸೌದಿ ಅರೇಬಿಯಾ ಒತ್ತಾಯ
ಮನಾಮಾ (ಬರ್ಹೈನ್): ಗಾಜಾಪಟ್ಟಿಯಲ್ಲಿ ಯುದ್ಧ ನಿಲ್ಲಿಸಬೇಕು ಎಂದು ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ರಾಜಕುಮಾರ ಫೈಸಲ್ ಬಿನ್ ಪರ್ಹಾನ್ ಅವರು ಒತ್ತಾಯಿಸಿದ್ದಾರೆ. 'ಇಸ್ರೇಲ್ ಸೇನೆ ಹಮಾಸ್ ವಿರುದ್ಧ ನಿರ್ಭೀತಿಯಿಂದ ವರ್ತಿಸುತ್ತಿದೆ ಮತ್ತು ಅದಕ್ಕೆ ಯಾವುದೇ ಶಿಕ್ಷೆ ಆಗುತ್ತಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ. 'ಇಸ್ರೇಲ್ ಜನಾಂಗೀಯ ದ್ವೇಷ ವಸಾಹತುಶಾಹಿ ಮತ್ತು ನರಹಂತಕ ದೇಶವಾಗುತ್ತಿದೆ. ಇಂಥ ದೇಶದ ವಿರುದ್ಧ ಜಗತ್ತು ಕ್ರಮಕೈಗೊಳ್ಳಲು ಇದು ಸಕಾಲ' ಎಂದು ಹೇಳಿದ್ದಾರೆ.