ಢಾಕಾ: ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಹಿಂದೂ ನಾಯಕ ಚಿನ್ಮಯಿ ಕೃಷ್ಣದಾಸ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಬಾಂಗ್ಲಾದೇಶದ ನ್ಯಾಯಾಲಯವು 2025ರ ಜನವರಿ 2ಕ್ಕೆ ಮುಂದೂಡಿದೆ.
ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಮೊಹಮ್ಮದ್ ಸೈಫುಲ್ ಇಸ್ಲಾಂ ಅವರು ಇಂದು (ಮಂಗಳವಾರ) ಕೃಷ್ಣದಾಸ್ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ್ದಾರೆ ಎಂದು ಬಾಂಗ್ಲಾದೇಶದ ಸುದ್ದಿಮಾಧ್ಯಮ 'ಬಿಡಿನ್ಯೂಸ್24 ಡಾಟ್ ಕಾಮ್' ವರದಿ ಮಾಡಿದೆ.
ಬಾಂಗ್ಲಾದೇಶದ 'ಸಮ್ಮಿಲಿತ್ ಸನಾತನಿ ಜಾಗರಣ ಜೋತೆ' ಹಿಂದೂ ಸಂಘಟನೆಯ ವಕ್ತಾರ ಚಿನ್ಮಯಿ ಕೃಷ್ಣದಾಸ್ ಅವರನ್ನು ದೇಶದ್ರೋಹದ ಆರೋಪದಲ್ಲಿ ಕಳೆದ ಸೋಮವಾರ (ನ.25) ಢಾಕಾದ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಮಂಗಳವಾರ (26) ಇವರ ಜಾಮೀನು ಅರ್ಜಿಯನ್ನು ಚಟ್ಟೋಗ್ರಾಮ ನ್ಯಾಯಾಲಯವು ತಿರಸ್ಕರಿಸಿ, ಜೈಲಿಗೆ ಕಳುಹಿಸಿತ್ತು.
ಚಿನ್ಮಯಿ ಕೃಷ್ಣದಾಸ್ ಅವರ ಬಂಧನದ ವೇಳೆ ನಡೆದ ಘರ್ಷಣೆಯಲ್ಲಿ ವಕೀಲ ಸೈಫುಲ್ ಇಸ್ಲಾಂ ಎಂಬವರು ಮೃತಪಟ್ಟಿದ್ದರು. ಕೃಷ್ಣದಾಸ್ ಅವರು ಈ ಹಿಂದೆ ಬಾಂಗ್ಲಾದೇಶದ ಇಸ್ಕಾನ್‌ನ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು.
ಯಾರು ಈ ಚಿನ್ಮಯಿ ಕೃಷ್ಣದಾಸ್?
'ಚಂದನ್ ಕುಮಾರ್ ಧರ್ ಪ್ರಕಾಶ್ ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ. ಇದು ಬಾಂಗ್ಲಾದಲ್ಲಿ ಈಗ ಬಂಧನದಲ್ಲಿರುವ ಹಿಂದೂ ಸಂಘಟನೆ 'ಸಮ್ಮಿಲಿತ್ ಸನಾತನಿ ಜಾಗರಣ ಜೋತೆ'ಯ ವಕ್ತಾರ ಚಿನ್ಮಯಿ ಅವರ ಮೂಲ ಹೆಸರು. ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ ಎಂದೇ ಅವರು ಪ್ರಖ್ಯಾತರು' ಎಂದು 'ಢಾಕಾ ಟ್ರಿಬ್ಯೂನ್' ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
'2007ರಿಂದ ಬಾಂಗ್ಲಾದ ಇಸ್ಕಾನ್ ನಡೆಸುವ 'ಪುಂಢರೀಕ ಧಾಮ್' ಧಾರ್ಮಿಕ ಕ್ಷೇತ್ರದ ಮುಖ್ಯಸ್ಥರಾಗಿದ್ದಾರೆ. 2016ರಿಂದ 2022ರವರೆಗೆ ಇಸ್ಕಾನ್‌ನ ಚಟ್ಟೋಗ್ರಾಮ ವಿಭಾಗದ ಕಾರ್ಯದರ್ಶಿಯೂ ಆಗಿದ್ದರು. ಇವರಿಗೆ 'ಶಿಶು ಭಕ್ತ' ಎಂಬ ಬಿರುದನ್ನೂ ನೀಡಲಾಗಿದೆ. ಬಹಳ ಸಣ್ಣ ವಯಸ್ಸಿನಲ್ಲಿಯೇ ಧಾರ್ಮಿಕ ಭಾಷಣಗಳನ್ನು ಮಾಡುತ್ತಾ, ದೇಶದಲ್ಲಿ ಪ್ರಸಿದ್ಧಿ ಗಳಿಸಿದ್ದರು' ಎನ್ನಲಾಗಿದೆ.
'ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ವಿರುದ್ಧ ದೇಶದಲ್ಲಿ ಭುಗಿಲೆದ್ದ ಪ್ರತಿಭಟನೆಯ ನಂತರದಲ್ಲಿ ಹಿಂದೂ ಸಮುದಾಯಗಳ ಮೇಲೆ ಹಲವು ದಾಳಿಗಳಾದವು. ಈ ಸಂದರ್ಭದಲ್ಲಿ ಆಗಸ್ಟ್‌ನಲ್ಲಿ 'ಸಮ್ಮಿಲಿತ್ ಸನಾತನ ಜಾಗರಣ ಜೋತೆ' ರೂಪುಗೊಂಡಿತು. ನಂತರದಲ್ಲಿ ಈ ಸಂಘಟನೆಗೆ ಚಿನ್ಮಯಿ ಅವರನ್ನು ವಕ್ತಾರರನ್ನಾಗಿ ನೇಮಿಸಲಾಯಿತು' ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
'ಈ ಸಂಘಟನೆಯು ಡಿ.13ಕ್ಕೆ ದೊಡ್ಡ ಮಟ್ಟದ ರ್‍ಯಾಲಿಯೊಂದನ್ನು ನಡೆಸಲಿದೆ. ಈ ಸಂಘಟನೆಯು ಚಟ್ಟೋಗ್ರಾಮ ಹಾಗೂ ರಂಗ್‌ಪುರದಲ್ಲಿ ಇತ್ತೀಚೆಗೆ ರ್‍ಯಾಲಿಯೊಂದನ್ನು ನಡೆಸಿತ್ತು. ಈ ರ್‍ಯಾಲಿಗಳಲ್ಲಿ ಚಿನ್ಮಯಿ ಅವರು ಹಿಂದೂಗಳ ಹಕ್ಕುಗಳ ಬಗ್ಗೆ ಭವೋದ್ವೇಗದ ಭಾಷಣ ಮಾಡಿದ್ದರು. ಇಸ್ಕಾನ್‌ನೊಂದಿಗೆ ನಂಟಿರುವ ಕಾರಣಕ್ಕಾಗಿ ಚಿನ್ಮಯಿ ಅವರು ಪ್ರಸಿದ್ಧರಾಗಿಲ್ಲ. ಬದಲಿಗೆ ಅವರ ಭಾಷಣಗಳು ಹಾಗೂ ಹೋರಾಟ ಕಾರಣಕ್ಕಾಗಿ ದೇಶದಾದ್ಯಂತ ಪ್ರಸಿದ್ಧರಾಗಿದ್ದರು' ಎನ್ನಲಾಗಿದೆ.