ನವದೆಹಲಿ: ಕುವೈತ್‌ಗೆ ಎರಡು ದಿನಗಳ ಪ್ರವಾಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಆರಂಭಿಸಿದ್ದು, 'ಪಶ್ಚಿಮ ಏಷ್ಯಾ ಪ್ರಾಂತ್ಯದಲ್ಲಿ ಭಾರತ ಹಾಗೂ ಕೊಲ್ಲಿ ರಾಷ್ಟ್ರದ ನಡುವಿನ ಶಾಂತಿ, ಭದ್ರತೆ ಹಾಗೂ ಸದೃಢತೆ ಸಹಕಾರಕ್ಕೆ ಈ ಪ್ರವಾಸ ಸಾಕ್ಷಿ' ಎಂದಿದ್ದಾರೆ.
ಸಿರಿಯಾದಲ್ಲಿ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಅವರ ಆಡಳಿತದ ಪತನ ಹಾಗೂ ಗಾಜಾದಲ್ಲಿ ಇಸ್ರೇಲ್ ದಾಳಿ ಮುಂದುವರಿದಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು ಕುವೈತ್‌ಗೆ ಭೇಟಿ ನೀಡುತ್ತಿದ್ದಾರೆ.
ಕುವೈತ್‌ಗೆ ಪ್ರಯಾಣ ಬೆಳೆಸುವ ಮುನ್ನ ಮಾತನಾಡಿರುವ ಮೋದಿ, 'ಕುವೈತ್‌ನ ಉನ್ನತ ನಾಯಕತ್ವದೊಂದಿಗೆ ನಡೆಸಲಿರುವ ಮಾತುಕತೆಗಳು ಭಾರತ ಹಾಗೂ ಕುವೈತ್ ನಡುವಿನ ಭವಿಷ್ಯದ ಪಾಲುದಾರಿಕೆಗೆ ಮಾರ್ಗ ಸಿದ್ಧಪಡಿಸಲಿವೆ' ಎಂದಿದ್ದಾರೆ.
ತಲೆಮಾರುಗಳಿಂದ ಕಾಪಾಡಿಕೊಂಡು ಬರಲಾಗುತ್ತಿರುವ ಕುವೈತ್‌ನೊಂದಿಗಿನ ಐತಿಹಾಸಿಕ ಬಾಂಧವ್ಯದ ಮೌಲ್ಯವನ್ನು ಗೌರವಿಸುತ್ತೇವೆ. ನಮ್ಮ ನಡುವೆ ಉತ್ತಮ ವ್ಯಾಪಾರ ಹಾಗೂ ಇಂಧನ ಒಪ್ಪಂದಗಳು ಮಾತ್ರವಲ್ಲ, ಬದಲಿಗೆ ಶಾಂತಿ, ಭದ್ರತೆ, ಸದೃಢತೆಯ ಹಾಗೂ ಪಶ್ಚಿಮ ಏಷ್ಯಾ ಪ್ರಾಂತ್ಯದಲ್ಲಿ ಸಮೃದ್ಧಿ ಸ್ಥಾಪಿಸುವ ನಿಟ್ಟಿನಲ್ಲಿ ಸಮಾನ ಮನಸ್ಸನ್ನು ಹೊಂದಿದ್ದೇವೆ' ಎಂದಿದ್ದಾರೆ.
ಈ ಪ್ರವಾಸದಲ್ಲಿ ಕುವೈತ್‌ನ ರಾಜ ಅಮೀರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲೂ ಉತ್ಸುಕನಾಗಿದ್ದೇನೆ. ಉಭಯ ರಾಷ್ಟ್ರಗಳ ಜನರ ಹಿತದೃಷ್ಟಿಯಿಂದ ಭವಿಷ್ಯಕ್ಕಾಗಿ ಪಾಲುದಾರಿಕೆಯನ್ನು ರೂಪಿಸುವ ನಿಟ್ಟಿನಲ್ಲಿ ಫಲಪ್ರದವಾದ ಮಾತುಕತೆಯನ್ನು ಎದುರು ನೋಡುತ್ತಿದ್ದೇನೆ' ಎಂದು ಪ್ರಧಾನಿ ಹೇಳಿದ್ದಾರೆ.
'ಇದೇ ಭೇಟಿಯ ಸಂದರ್ಭದಲ್ಲಿ ಕುವೈತ್‌ನಲ್ಲಿ ನೆಲೆಸಿರುವ ಭಾರತೀಯರನ್ನೂ ಭೇಟಿ ಮಾಡಲು ಉತ್ಸುಕನಾಗಿದ್ದೇನೆ. ಇವರಿಂದಾಗಿ ಎರಡೂ ದೇಶಗಳ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗಿದೆ' ಎಂದಿದ್ದಾರೆ.