ಚಂಡೀಗಢ: ಪಂಜಾಬ್‌ನ ಮೊಹಾಲಿ ಜಿಲ್ಲೆಯ ಸೊಹಾನಾ ಗ್ರಾಮದಲ್ಲಿ ಶನಿವಾರ ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದಿದ್ದು, ಮೃತರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.
ನಿನ್ನೆ ಸಂಜೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದ್ದು, ಕನಿಷ್ಠ ಐವರು ಅವಶೇಷಗಳ ಅಡಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ದೃಷ್ಟಿ ವರ್ಮಾ (20) ಎಂಬ ಮಹಿಳೆಯನ್ನು ರಕ್ಷಿಸಿ ಸೊಹಾನಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ರಾತ್ರಿಯಿಡೀ ರಕ್ಷಣಾ ಕಾರ್ಯ ಮುಂದುವರಿದಿದ್ದು, ಇಂದು ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಇದರೊಂದಿಗೆ ಘಟನೆಯಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹ ವ್ಯಕ್ತಿಯ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಜತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆ ಮುಂದುವರೆಸಿವೆ ಎಂದು ಮೊಹಾಲಿಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ದಮನ್‌ದೀಪ್ ಕೌರ್ ತಿಳಿಸಿದ್ದಾರೆ.
ಕಟ್ಟಡದ ಮಾಲೀಕರಾದ ಪರ್ವಿಂದರ್ ಸಿಂಗ್ ಮತ್ತು ಗಗನ್‌ದೀಪ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಮೊಹಾಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಪರೀಕ್ ತಿಳಿಸಿದ್ದಾರೆ.