ಇಂಫಾಲ್: ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‌ನೆಟ್ ಮೇಲೆ ಹೇರಿದ್ದ ನಿಷೇಧವನ್ನು ಎರಡು ದಿನಗಳ ಕಾಲ ವಿಸ್ತರಿಸಿ ಮಣಿಪುರ ಸರ್ಕಾರವು ಮಂಗಳವಾರ ಆದೇಶ ಹೊರಡಿಸಿದೆ.
ಡಿಸೆಂಬರ್ 5ರ ಸಂಜೆ 5.15ರವರೆಗೆ ನಿಷೇಧ ವಿಸ್ತರಿಸಲಾಗಿದೆ ಎಂದು ಗೃಹ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
'ಕಾನೂನು ಹಾಗೂ ಸುವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು, ರಾಜ್ಯ ಸರ್ಕಾರವು ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ಬಿಷ್ಣುಪುರ್, ತೌಬಾಲ್, ಚುರಾಚಾಂದಪುರ, ಕಂಗ್‌ಪೊಕ್ಪಿ, ಕಾಕ್ಚಿಂಗ್, ಜಿರಿಬಾಮ್ ಸೇರಿ 9 ಜಿಲ್ಲೆಗಳಲ್ಲಿ ಜನರ ಹಿತದೃಷ್ಟಿಯಿಂದ ಮೊಬೈಲ್ ಇಂಟರ್‌ನೆಟ್ ಮೇಲಿನ ನಿಷೇಧವನ್ನು ಮತ್ತೆ ಎರಡು ದಿನಗಳ ಕಾಲ ವಿಸ್ತರಿಸಿದೆ.
ನ.16ರಂದು ಹಿಂಸಾಚಾರವು ಭುಗಿಲೆದ್ದ ಬಳಿಕ ಸಮಾಜ ವಿರೋಧಿ ಸಂದೇಶ ಹರಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರವು ಮೊಬೈಲ್ ಇಂಟರ್‌ನೆಟ್ ಮೇಲೆ ನಿಷೇಧ ಹೇರಿತ್ತು. ಇದಾದ ಬಳಿಕ ಹಲವು ಬಾರಿ ನಿಷೇಧದ ಅವಧಿಯನ್ನು ವಿಸ್ತರಿಸಿತ್ತು.
ನ.16ರಂದು ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳ ಮೃತದೇಹ ಪತ್ತೆಯಾದ ಬಳಿಕ ರಾಜ್ಯದಲ್ಲಿ ಹಿಂಸಾಚಾರ ತಲೆದೋರಿದ್ದರಿಂದ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಆರೋಗ್ಯ ಸೇವೆ, ಶೈಕ್ಷಣಿಕ ಸಂಸ್ಥೆ ಹಾಗೂ ಇತರೆ ಕಚೇರಿಗಳ ದೈನಂದಿನ ಕೆಲಸಕ್ಕೆ ಅಡಚಣೆ ಉಂಟಾಗಿದ್ದರಿಂದ ಬ್ರಾಡ್‌ಬ್ಯಾಂಡ್ ಮೇಲಿನ ನಿಷೇಧವನ್ನು ಮಣಿಪುರ ಸರ್ಕಾರವು ನ.19ರಂದೇ ಹಿಂದಕ್ಕೆ ಪಡೆದಿತ್ತು.