ಮುಂಬೈ: 2019ರಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವ ಮೊದಲು 'ನಾನು ಪುನಃ ಬರುತ್ತೇನೆ' ಎಂದು ಹೇಳಿದ್ದ ದೇವೇಂದ್ರ ಫಡಣವೀಸ್, ಗುರುವಾರ 3ನೇ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ವಿನಯತೆಯಿಂದಲೇ ರಾಜಕೀಯ ಹಾಗೂ ಸಮಾಜದಲ್ಲಿ ತಮ್ಮ ಸ್ಥಾನ ಗಟ್ಟಿಗೊಳಿಸುತ್ತಾ ಬಂದ 54 ವರ್ಷದ ಫಡಣವೀಸ್, ತಾಳ್ಮೆ, ಪಕ್ಷ ನಿಷ್ಠೆ ಹಾಗೂ ಹುದ್ದೆಗೇರಲು ಬೇಕಾದ ಕರಾರುವಕ್ಕಾದ ತಂತ್ರಗಳನ್ನು ಹೆಣೆದವರು.
ನಾಗ್ಪುರದ ಅತ್ಯಂತ ಕಿರಿಯ ಮೇಯರ್ ಆಗುವ ಮೂಲಕ ರಾಜಕೀಯದಲ್ಲಿ ಗುರುತಿಸಿಕೊಂಡರು.ಅದರಿಂದ ಪಕ್ಷದಲ್ಲಿ ತಮ್ಮ ಸ್ಥಾನವನ್ನು ಅವರು ಗಟ್ಟಿಗೊಳಿಸುತ್ತಾ, ಹಂತ ಹಂತವಾಗಿ ಮೇಲಕ್ಕೇರುತ್ತಲೇ ಬಂದವರು. ಇದೀಗ ಮೂರನೇ ಬಾರಿಗೆ ಮುಖ್ಯಮಂತ್ರಿ ಆಗುವ ಮೂಲಕ ರಾಜ್ಯದಲ್ಲಿ ಉನ್ನತ ಹುದ್ದೆಗೇರಿದ 2ನೇ ಬ್ರಾಹ್ಮಣ ಸಮುದಾಯದ ವ್ಯಕ್ತಿಯಾಗಿದ್ದಾರೆ. ಇವರಿಗಿಂತ ಮೊದಲು ಇದೇ ಸಮುದಾಯದ ಶಿವಸೇನೆಯ ಮನೋಹರ ಜೋಶಿ ಇದೇ ಸಮುದಾಯದ ಮುಖ್ಯಮಂತ್ರಿಯಾಗಿದ್ದರು.
2014ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದ ಫಡಣವೀಸ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಮೆಚ್ಚುಗೆಗೆ ಪಾತ್ರರಾದರು. 'ದೇಶಕ್ಕೆ ನಾಗ್ಪುರದ ಕೊಡುಗೆ' ಎಂದು ಇವರ ಕುರಿತು ಪ್ರಧಾನಿ ಮೋದಿ ಬಣ್ಣಿಸುವ ಮೂಲಕ ಬೆನ್ನು ತಟ್ಟಿದ್ದರು. ಆ ಸಂದರ್ಭದಲ್ಲಿ ಫಡಣವೀಸ್ ಅವರೇ ಪಕ್ಷದ ರಾಜ್ಯ ಘಟದಕ ಅಧ್ಯಕ್ಷರಾಗಿದ್ದರು.
ಜನಸಂಘದಲ್ಲಿದ್ದ ದೇವೇಂದ್ರ ಅವರ ತಂದೆ ಗಂಗಾಧರ ಫಡಣವೀಸ್ ಅವರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ರಾಜಕೀಯ ಗುರು ಎಂದೇ ಕರೆದಿದ್ದಾರೆ. ಮನೆಯಲ್ಲೇ ರಾಜಕೀಯದ ವಾತಾವರಣವಿದ್ದ ಕಾರಣ ದೇವೇಂದ್ರ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದರು. 22ನೇ ವಯಸ್ಸಿನಲ್ಲಿ (1989) ಕಾರ್ಪೊರೇಟರ್ ಆದರು. 27ನೇ ವಯಸ್ಸಿನಲ್ಲಿ ಮೇಯರ್ (1997) ಆದರು. 1999ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿ ಗೆಲುವು ದಾಖಲಿಸಿದರು. ಅಲ್ಲಿಂದ ಅವರು ಸೋಲು ಕಂಡವರೇ ಅಲ್ಲ. ಕಳೆದ ಚುನಾವಣೆಯಲ್ಲಿ ನಾಗ್ಪುರ ಆಗ್ನೇಯ ಕ್ಷೇತ್ರದಿಂದ ಗೆಲುವು ದಾಖಲಿಸಿದರು.
2019ರ ನ. 23ರಂದು 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅವರು ಪ್ರಮಾಣವಚನ ಸ್ವೀಕರಿಸಿದರು. ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಎನ್‌ಸಿಪಿಯಲ್ಲಿನ ಆಂತರಿಕ ಬಿಕ್ಕಟ್ಟಿನಿಂದಾಗಿ ಸರ್ಕಾರ ಬಹುಮತ ಕಳೆದುಕೊಂಡಿದ್ದರಿಂದ ನ. 26ರಂದು ಫಡಣವೀಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ನಂತರ ರಚನೆಯೊಂಡ ಏಕನಾಥ ಶಿಂದೆ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾದರು.
2024ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಜತೆಗೆ, ಎನ್‌ಸಿಪಿ ಹಾಗೂ ಶಿವಸೇನೆ ಒಳಗೊಂಡ ಮಹಾಯುತಿಯನ್ನು ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೆ ತರುವಲ್ಲಿ ಫಡಣವೀಸ್ ಪ್ರಮುಖ ಪಾತ್ರ ವಹಿಸಿದ್ದರು.