ಮಂಜೇಶ್ವರ : ಪ್ರದೇಶವನ್ನು ಮಾಲಿನ್ಯ ಮುಕ್ತಗೊಳಿಸಿ ಪ್ರತಿಯೊಬ್ಬ ಯುವಕರನ್ನು ಭಾರತದ ಉತ್ತಮ ಪ್ರಜೆಯನ್ನಾಗಿಸಬೇಕೆಂಬ ಉದ್ದೇಶದೊಂದಿಗೆ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿರುವ ಉಪ್ಪಳ ಮಣಿಮುಂಡದ ಕೆಲವೊಂದು ಪ್ರಜ್ಞಾವಂತ ಮಂದಿ 1995 ರಲ್ಲಿ ಸ್ಥಾಪಿಸಿದ ಬ್ರದರ್ಸ್ ಮಣಿಮುಂಡ ಎಂಬ ಸಂಘಟನೆ ಸಮಾಜ ಸೇವೆಯಲ್ಲಿ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲೇ ಗಮನ ಸೆಳೆದು ಇದೀಗ ತನ್ನ ಸುದೀರ್ಫವಾದ 30 ನೇ ವರ್ಷವನ್ನು ಪೂರೈಸಿದ ಸಂಭ್ರಮದಲ್ಲಿದೆ.
ಮಣಿಮುಂಡ ಪ್ರದೇಶವನ್ನು ಮಾದಕ ಮುಕ್ತಗೊಳಿಸಿ ಇಲ್ಲಿಯ ಯುವಕರನ್ನು ಅಡ್ಡದಾರಿಯಿಂದ ಧನಾತ್ಮಕತೆಯೆಡೆಗೆ ಕರೆತರುವ ಪ್ರಯತ್ನ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಕುವುದರ ವಿರುದ್ಧ ಹಾಗೂ ಮಾದಕ ದ್ರವ್ಯಗಳ ವಿರುದ್ಧ ಮನೆ ಮನೆ ತೆರಳಿ ಜಾಗೃತಿ ಶಿಬಿರ, ಶುಚಿತ್ವದ ಪ್ರಾಧಾನ್ಯತೆ, ಪ್ರದೇಶದ ಯಾವೊಂದು ಯುವಕರೂ ವಿದ್ಯಾಭ್ಯಾಸದಿಂದ ವಂಚಿತರಾಗದ ರೀತಿಯಲ್ಲಿ ತಳ ಮಟ್ಟದ ಜನತೆಗೆ ಶಿಕ್ಷಣ, ಆರೋಗ್ಯ ಹಾಗೂ ಸೌಕರ್ಯಗಳನ್ನು ಒದಗಿಸುವಲ್ಲಿ ಈ ಸಂಘಟನೆಯ ಯುವಕರು ಮುಂಚೂಣಿಯಲ್ಲಿದ್ದಾರೆ.
ಇದೀಗ ಸಂಘಟನೆಯ ಸುದೀರ್ಘ ಪಯಣದ 30 ನೇ ವಾರ್ಷಿಕೋತ್ಸವದಂಗವಾಗಿ ಭಾನುವಾರದಂದು ಹಮ್ಮಿಕೊಂಡ ಮಣಿಮುಂಡ ಫೆಸ್ಟ್ 24ಕ್ಕೆ ಮ್ಯಾರಥಾನ್ ಓಟದೊಂದಿಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ 7 ಗಂಟೆಗೆ ಹೊಸಂಗಡಿ ಜಂಕ್ಷನ್ ನಲ್ಲಿ ಅಬು ರೋಯಲ್ ಬೊಳ್ಳಾರ್ ಓಟಗಾರರಿಗೆ ಧ್ವಜವನ್ನು ಹಸ್ತಾಂತರಿಸಿ ಮಣಿಮುಂಡ ಫೆಸ್ಟ್ ಗೆ ಚಾಲನೆ ನೀಡಿದರು.
ಮಣಿಮುಂಡ ಬ್ರದರ್ಸ್ ತಂಡದ ಯುವಕರಿಂದ ಹೊಸಂಗಡಿಯಿಂದ ಸರ್ವೀಸ್ ರಸ್ತೆ ಮೂಲಕ ಆರಂಭಗೊಂಡ ಮ್ಯಾರಥಾನ್ ಓಟ ಉಪ್ಪಳ ರೈಲ್ವೇ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಗೊಂಡಿತು.
ಬಳಿಕ ಮಣಿಮುಂಡ ಶಾಲಾ ಮೈದಾನದಲ್ಲಿ ಯುವಕರಲ್ಲಿ ಕ್ರೀಡಾ ಮನೋಭಾವ ಮತ್ತು ಶಾರೀರಿಕ ಚಟುವಟಿಕೆಗಳನ್ನು ಉತ್ತೇಜಿಸಲು ಹೈ ಜಂಪ್, ಲಾಂಗ್ ಜಂಪ್, ಶಾಟ್ ಫುಟ್, ಡಿಸ್ಕಸ್ ತ್ರೋ ಸೇರಿದಂತೆ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವು ಶಾಲಾ ಮೈದಾನದಲ್ಲಿ ಉತ್ಸಾಹಭರಿತ ವಾತಾವರಣದಲ್ಲಿ ರಂಗೇರಿತು.