ನವದೆಹಲಿ: 30 ವರ್ಷಗಳ ಹಿಂದೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯ ಶಿಕ್ಷೆ ಪ್ರಮಾಣವನ್ನು ಒಂಬತ್ತು ತಿಂಗಳಿಗೆ ಇಳಿಸಿ ಸುಪ್ರೀಂ ಕೋರ್ಟ್ ಇಂದು (ಸೋಮವಾರ) ಆದೇಶ ಹೊರಡಿಸಿದೆ.
ಮೇಲ್ಮನವಿದಾರನ ಪರ ವಾದ ಮಂಡಿಸಿದ ವಕೀಲ ದುಶ್ಯಂತ್ ಪರಾಶರ್, ಇದು ಸುಮಾರು 30 ವರ್ಷಗಳ ಹಿಂದೆ (1994) ನಡೆದಿರುವ ಘಟನೆಯಾದ್ದರಿಂದ ಈ ಪ್ರಕರಣವನ್ನು ನ್ಯಾಯಾಲಯವು ಸೌಮ್ಯ ದೃಷ್ಟಿಕೋನದಿಂದ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಜತೆಗೆ, ಸಂತ್ರಸ್ತೆ ಮತ್ತು ಆರೋಪಿ ಇಬ್ಬರಿಗೂ ಮದುವೆಯಾಗಿ ಮಕ್ಕಳಿದ್ದು, ಅವರಿಗೂ ಮದುವೆ ವಯಸ್ಸಾಗಿದೆ. ಹಾಗಾಗಿ ಈ ಎಲ್ಲಾ ಅಂಶಗಳನ್ನು ಪರಿಗಣಿಸುವಂತೆಯೂ ಕೋರಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ನಾನು ಅಪ್ರಾಪ್ತ ಎಂದು ಮೇಲ್ಮನವಿದಾರ ಘೋಷಿಸಿಕೊಂಡಿದ್ದು, ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ಸೆಕ್ಷನ್ 9(2)ರ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಘಟನೆಯ ದಿನಾಂಕದಂದು ಮೇಲ್ಮನವಿದಾರನ ವಯಸ್ಸು 16 ವರ್ಷಕ್ಕಿಂತ ಕಡಿಮೆ ಇತ್ತು ಎಂಬುದು ದೃಢಪಟ್ಟಿದೆ. ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯವು ನಡೆಸಿದ ವಿಚಾರಣೆಯಲ್ಲಿ ದೂರುದಾರರು, ಆರೋಪಿ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.