ನವದೆಹಲಿ: ಆರು ಕಲ್ವರಿ- ದರ್ಜೆಯ ಜಲಾಂತರ್ಗಾಮಿ ನೌಕೆಗಳನ್ನು ಸ್ವದೇಶಿ ನಿರ್ಮಿತ ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ ಸಿಸ್ಟಮ್ (ಎಐಪಿ) ಮತ್ತು ಭಾರಿ ಕ್ಷಿಪಣಿಗಳಿಂದ ಸಜ್ಜುಗೊಳಿಸಲು ಸುಮಾರು ₹3,000 ಕೋಟಿ ಮೌಲ್ಯದ ಎರಡು ಒಪ್ಪಂದಗಳಿಗೆ ರಕ್ಷಣಾ ಸಚಿವಾಲಯವು ಸೋಮವಾರ ಸಹಿ ಹಾಕಿದೆ.
ಈ ಜಲಾಂತರ್ಗಾಮಿ ನೌಕೆಗಳಿಗೆ ಎಐಪಿ ನಿರ್ಮಾಣ ಮತ್ತು ಅದರ ಅಳವಡಿಕೆಗೆ ಸುಮಾರು ₹1,990 ಕೋಟಿ ಮೌಲ್ಯದ ಒಂದು ಒಪ್ಪಂದಕ್ಕೆ ಮುಂಬೈನ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್‌ನೊಂದಿಗೆ ಸಹಿ ಹಾಕಲಾಯಿತು. ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಎಐಪಿಯು ಜಲಾಂತರ್ಗಾಮಿ ನೌಕೆಗಳನ್ನು ಎರಡು ವಾರಗಳಿಗಿಂತ ಹೆಚ್ಚು ಕಾಲ ನೀರಿನಡಿ ಉಳಿಯಲು ಇದು ಅನುವು ಮಾಡಿಕೊಡುತ್ತದೆ ಎಂದು ಮೂಲಗಳು ತಿಳಿಸಿವೆ.
ಡಿಆರ್‌ಡಿಒ ಅಭಿವೃದ್ಧಿಪಡಿಸುತ್ತಿರುವ ಎಲೆಕ್ಟ್ರಾನಿಕ್ ಹೆವಿವೇಯ್ಟ್ ಟಾರ್ಪಿಡೊಗಳನ್ನು (ಭಾರಿ ಕ್ಷಿಪಣಿ) ಅಳವಡಿಸಲು ಅಂದಾಜು ₹877 ಕೋಟಿ ವೆಚ್ಚದ ಎರಡನೇ ಒಪ್ಪಂದಕ್ಕೆ ಕಲ್ವರಿ (ಸ್ಕಾರ್ಪೀನ್) ವರ್ಗದ ಜಲಾಂತರ್ಗಾಮಿ ನೌಕೆಗಳ ಮೂಲ ಉಪಕರಣ ತಯಾರಕ ಫ್ರಾನ್ಸ್‌ನ ನೇವಲ್ ಗ್ರೂಪ್‌ನೊಂದಿಗೆ ಸಹಿ ಮಾಡಲಾಯಿತು.
ಫ್ರಾನ್ಸ್‌ನ ತಂತ್ರಜ್ಞಾನದ ಬೆಂಬಲದೊಂದಿಗೆ, ಭಾರತವು ಆರು ಕಲ್ವರಿ-ವರ್ಗದ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿದೆ. ಇದರಲ್ಲಿ ಐದು ನೌಕೆಗಳು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿ, ಕಾರ್ಯಾಚರಣೆಯಲ್ಲಿವೆ. ಆರನೆಯದಾದ ವಾಗ್ಶೀರ್ ಇನ್ನಷ್ಟೇ ನೌಕಾಪಡೆಗೆ ಸೇರ್ಪಡೆಯಾಗಬೇಕಿದೆ. ಇದು ಬರುವ ಜನವರಿ ಮಧ್ಯದಲ್ಲಿ ಮುಂಬೈನಲ್ಲಿ ನಡೆಯುವ ಸಮಾರಂಭದಲ್ಲಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.
'ಎಐಪಿ ತಂತ್ರಜ್ಞಾನ ಅಳವಡಿಕೆಯಿಂದ ಜಲಾಂತರ್ಗಾಮಿ ನೌಕೆಗಳ ಬಾಳಿಕೆ ಹೆಚ್ಚಲಿದೆ. ಜತೆಗೆ ಟಾರ್ಪಿಡೊ ಅಳವಡಿಕೆಯು ಜಲಾಂತರ್ಗಾಮಿಗಳ ದಾಳಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ' ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ 62 ನೌಕಾ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ನೌಕಾಪಡೆಯು ಇನ್ನು ಒಂದು ವರ್ಷದಲ್ಲಿ ಪ್ರತಿ ತಿಂಗಳು ಕನಿಷ್ಠ ಒಂದು ನೌಕೆಯನ್ನು ನೌಕಾಪಡೆಗೆ ಸೇರಿಸುವ ಯೋಜನೆ ಹೊಂದಿದೆ. 2035 ರ ವೇಳೆಗೆ ನೌಕಾಪಡೆಗೆ ಇನ್ನೂ 100 ಹಡಗುಗಳು ಮತ್ತು ಜಲಾಂತರ್ಗಾಮಿಗಳನ್ನು ಸೇರ್ಪಡೆ ಮಾಡುವ ಗುರಿಯನ್ನು ರಕ್ಷಣಾ ಇಲಾಖೆ ಹೊಂದಿದೆ.
ಮಜಗಾಂವ್ ಹಡಗುಕಟ್ಟೆಯಲ್ಲಿ ಹೆಚ್ಚುವರಿ ಮೂರು ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕಾಗಿ ಫ್ರಾನ್ಸ್‌ನ ನೇವಲ್ ಗ್ರೂಪ್‌ನೊಂದಿಗೆ ರಕ್ಷಣಾ ಸಚಿವಾಲಯವು ನಡೆಸುತ್ತಿರುವ ಮಾತುಕತೆಯ ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.