ಬದಿಯಡ್ಕ: ದೇವರನ್ನು ಒಲಿಸಿಕೊಳ್ಳಲು ಭಜನೆ ಸುಲಭದ ಮಾರ್ಗವಾಗಿದೆ. ಭಜನಾ ಮಂದಿರಗಳಲ್ಲಿ ಎಲ್ಲ ಸ್ತರದ ಜನರು ಜಾತಿಬೇಧವಿಲ್ಲದೆ ದೇವರನ್ನು ಸ್ತುತಿಸುವ ಮೂಲಕ ಹಿಂದೂಸಮಾಜವು ಒಂದುಗೂಡುತ್ತದೆ. ಅಯ್ಯಪ್ಪನೆಂಬ ಶಕ್ತಿ ಹಿಂದೂಸಮಾಜಕ್ಕೆ ಬಲವನ್ನು ತಂದುಕೊಟ್ಟಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಸೇವಾಸಂಘದ 30ನೇ ವಾರ್ಷಿಕೋತ್ಸವದ ಸಂದರ್ಭ ಶನಿವಾರ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನವನ್ನು ನೀಡಿ ಮಾತನಾಡಿದರು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಉದ್ಘಾಟಿಸಿ ಮಾತನಾಡಿ, ಅಯ್ಯಪ್ಪ ಕ್ಷೇತ್ರವು ಜಗತ್ತಿನಿಂದ ಅನೇಕ ಭಕ್ತರನ್ನು ತನ್ನತ್ತ ಸೆಳೆದಿದೆ. ಕೇರಳವು ಪುಣ್ಯದ ನಾಡು. ರಾಜಕೀಯದ ಆಟ, ವಿಮರ್ಷೆಗಳು, ಚರ್ಚೆಗಳು ಎಷ್ಟೇ ನಡೆದರೂ ಅಯ್ಯಪ್ಪನ ಪೂಜೆ ಮಾತ್ರ ಚಾಚೂ ತಪ್ಪದೆ ನಡೆಯುತ್ತಿರುವುದು ಆತನ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ತಾನು ಅಯ್ಯಪ್ಪನಾಗಿ ಇನ್ನೊಬ್ಬರಲ್ಲಿ ಅಯ್ಯಪ್ಪನನ್ನು ಕಾಣುವ ಭಕ್ತಿಯ ಆಚರಣೆ, ದೇವರೊಂದಿಗಿನ ಅನುಭವವನ್ನು ಪಡೆಯಲು ಮಾಲೆಹಾಕಿದ ವ್ರತಧಾರಿಗಳಿಗೆ ಸಾಧ್ಯವಿದೆ. ನಂಬಿಕೆ ನಿಷ್ಕಳಂಕ ಭಕ್ತಿ ಸನಾತನ ಧರ್ಮದ ಧ್ಯೇಯವಾಗಿದೆ ಎಂದರು.
ಪ್ರಸಿದ್ಧ ವೈದ್ಯ ಡಾ. ಜನಾರ್ದನ ನಾಯ್ಕರಿಗೆ ಹುಟ್ಟೂರ ಸನ್ಮಾನ :
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಕಾಸರಗೋಡಿನ ಜನರಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಜನಾರ್ದನ ನಾಯ್ಕ ಚುಕ್ಕಿನಡ್ಕ ಅವರಿಗೆ ಈ ಸಂದರ್ಭದಲ್ಲಿ ಹುಟ್ಟೂರ ಅಭಿನಂದನೆ ನಡೆಯಿತು. ಶ್ರೀಗಳು ಶಾಲು ಹೊದೆಸಿ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಜೊತೆಗೂಡಿ ಸನ್ಮಾನಿಸಿದರು. ನಿವೃತ್ತ ಅಂಚೆ ಮಾಸ್ತರ್ ಸುಂದರ ಶೆಟ್ಟಿ ಕೊಲ್ಲಂಗಾನ ಅಭಿನಂದನಾ ಭಾಷಣಗೈದರು. ಈ ಸಂದರ್ಭ ಡಾ. ಜನಾರ್ದನ ನಾಯ್ಕ ಅವರು ಮಾತನಾಡಿ ಜೀವನದಲ್ಲಿ ಆಧ್ಯಾತ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿಗೆ ಬಂದ ರೋಗವನ್ನು ಸರಿಯಾಗಿ ಅರ್ಥೈಸಿಕೊಳ್ಳಬಲ್ಲನಿಗೆ ಶ್ರೇಷ್ಠ ವೈದ್ಯನಾಗಲು ಸಾಧ್ಯವಿದೆ. ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಬೆಳಕು ಕಾಣದಿದ್ದರೂ ಭಜನೆಯ ಝೇಂಕಾರ ಕೇಳಿಬರುತ್ತಿತ್ತು. ಆದರೆ ಆಧುನಿಕ ಯುಗದಲ್ಲಿ ಅದನ್ನು ನಾವು ಮರೆತು ಮುಂದುವರಿಯದೆ ದೇವತಾ ಕಾರ್ಯದೊಂದಿಗೆ ಮುಂದಡಿಯಿಡಬೇಕು. ಸಸ್ಯಾಹಾರವೇ ನಮ್ಮ ಆರೋಗ್ಯಕ್ಕೆ ಶ್ರೇಷ್ಠವಾಗಿದೆ. ಸನಾತನ ಆಹಾರ ಪದ್ಧತಿಯಲ್ಲಿ ನಮಗರಿವಿಲ್ಲದೆ ಗೌಪ್ಯವಾಗಿರುವ ಅದೆಷ್ಟೋ ವಿಚಾರಗಳನ್ನು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿ ಹುಟ್ಟೂರಿನ ಸನ್ಮಾನಕ್ಕೆ ಕೃತಜ್ಞತೆ ಅರ್ಪಿಸಿದರು.
ಗೌರವಾಧ್ಯಕ್ಷ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಂದಿರದ ಕುಂಞÂಕಣ್ಣ ಗುರುಸ್ವಾಮಿ, ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ, ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಮೊಳೆಯಾರು, ಗ್ರಾಮಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ್ ಮಾನ್ಯ, ವಿಹಿಂಪ ಜಿಲ್ಲಾ ಸಾಮರಸ್ಯ ಪ್ರಮುಖ್ ಮಂಜುನಾಥ ಡಿ.ಮಾನ್ಯ, ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಚುಕ್ಕಿನಡ್ಕ ಶುಭಹಾರೈಸಿದರು. ಶ್ರೀಮಂದಿರದ ಸ್ಥಾಪಕ ಕಾರ್ಯದರ್ಶಿ ಸಿ.ಎಚ್.ಗೋಪಾಲ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಮಂದಿರದ ಇತಿಹಾಸವನ್ನು ತೆರೆದಿಟ್ಟರು. ನಿವೃತ್ತ ಅಧ್ಯಾಪಕ ನವೀನ ಚಂದ್ರ ಮಾನ್ಯ ಅಭಿನಂದನಾ ಪತ್ರ ವಾಚಿಸಿದರು. ಕಾರ್ಯದರ್ಶಿ ಪ್ರಕಾಶ ಕಾರ್ಮಾರು ಸ್ವಾಗತಿಸಿ, ಹರಿಪ್ರಸಾದ್ ಸಿ.ಎಚ್. ಚುಕ್ಕಿನಡ್ಕ ವಂದಿಸಿದರು. ಮೋಹನ ಮಾನ್ಯ ಕಾರ್ಯಕ್ರಮ ನಿರೂಪಪಿಸಿದರು. ಮಧ್ಯಾಹ್ನ ಮಹಾಪೂಜೆ, ಅನ್ನದಾನ, ಅಪರಾಹ್ನ ವಿಶ್ವನಾಥ ರೈ ಮಾನ್ಯ ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ ವಾಲಿಮೋಕ್ಷ ಪ್ರದರ್ಶನಗೊಂಡಿತು. ಪ್ರಾತಃಕಾಲ ದೀಪ ಪ್ರತಿಷ್ಠೆ, ಶರಣಂ ವಿಳಿ, 24 ತೆಂಗಿನ ಕಾಯಿ ಗಣಪತಿ ಹೋಮ, ಭಜನೆ ನಡೆಯಿತು.