ಮಧೂರು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಹಾಗೂ ಪುರಾತನ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬಹುನಿರೀಕ್ಷಿತ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆ 2025ರ ಮಾ. 27ರಿಂದ ಏ. 7ರ ವರೆಗೆ ಜರುಗಲಿದೆ.ಮಾಯಿಪ್ಪಾಡಿ ಅರಮನೆಯ ರಾಜರು ದೇವಾಲಯದ ಅನುವಂಶಿಕ ಮೊಕ್ತೇಸರರಾಗಿದ್ದು, ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿರುವುದಾಗಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಅವರು ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬ್ರಹ್ಮಾಂಡ ಪುರಾಣ ಹಾಗೂ ಸ್ಕಂದ ಪುರಾಣಗಳಲ್ಲಿ ಉಲ್ಲೇಖಿತಗೊಂಡಿರುವ ಮಧೂರು ದೇಗುಲ ಪವಿತ್ರ ಮಧುವಾಹಿನಿ ಹೊಳೆ ದಡದಲ್ಲಿ ನೆಲೆನಿಂತಿದೆ. ಮೊಗೇರ ಸಮುದಾಯದ ಮದರು ಮಾತೆಗೆ ಶಿವಲಿಂಗ ಲಭಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಮಧೂರು ಹೆಸರು ಬಂದಿರುವುದಾಗಿಯೂ ಪ್ರತೀತಿಯಿದೆ. 1784ರಲ್ಲಿ ಟಿಪ್ಪು ಸಉಲ್ತಾನ್ ಕುಂಬಳೆ ಸಈಮೆಗೆ ದಂಡೆತ್ತಿಬಂದಾಗ ಮಧೂರು ದೇಗುಲಕ್ಕೂ ದಾಳಿಮಾಡಿರುವ ಬಗ್ಗೆ ಉಲ್ಲೇಖವಿದೆ. ಇದರ ಕುರುಹಾಗಿ ಚಂದ್ರಶಾಲೆಯ ಮಹಡಿಯಲ್ಲಿ ಕಠಾರಿಯಿಂದ ಕಡಿದ ಗುರುತು ಇಂದಿಗೂ ಕಾಣಬಹುದಾಘಿದೆ. ದೇವಾಲಯದಲ್ಲಿ ಇತಿಹಾಸ ಪ್ರಕಾರ 2025ರಲ್ಲಿ ನಡೆಯುತ್ತಿರುವುದು ಐದನೇ ಮೂಡಪ್ಪ ಸೇವೆಯಾಗಿದೆ. 1795 ಹಾಗೂ 1797, ನಂತರ 1962, 1992ರಲ್ಲಿ ಬ್ರಹ್ಮಕಲಶೋತ್ಸವದೊಂದಿಗೆ ಮೂಡಪ್ಪ ಸೇವೆ ನಡೆದಿದೆ. ಪ್ರಸಕ್ತ 33ವರ್ಷಗಳ ನಂತರ ಅಷ್ಟಬಂಧ ಬ್ರಹ್ಮಕಲಶೋತ್ಸವದೊಂದಿಗೆ ಮೂಡಪ್ಪ ಸೇವೆ ನಡೆಯಲಿದೆ.
ಸುಮಾರು 24ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾರ್ಯಗಳನ್ನು ನಡೆಸಲಾಗಿದ್ದು, ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆ ಗೆ ಹತ್ತು ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ. ಬ್ರಹ್ಮಕಲಶೋತ್ಸವದ ಪ್ರಚಾರಾರ್ಥ ಜಿಲ್ಲೆಯ ನಾನಾ ಕಡೆ ಉಪಸಮಿತಿಗಳನ್ನು ರಚಿಸಲಾಗಿದೆ. ಅಲ್ಲದೆ ಮಂಗಳೂರು, ಪುತ್ತೂರು, ಮುಂಬೈ ಅಲ್ಲದೆ ವಿದೇಶಿ ಸಮಿತಿಯನ್ನೂ ರಚಿಸುವ ಮೂಲಕ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಬಗ್ಗೆ ಪ್ರತಿಯೊಬ್ಬ ಭಕ್ತನೂ ಕೈಜೋಡಿಸುವಂತೆ ಮಾಡಲಾಗುವುದು. ಕಾಸರಗೋಡಿನಿಮದ ಮಧೂರು ಸಂಚರಿಸುವ ರಸ್ತೆ ಶಿಥಿಲಾವಸ್ಥೆಯಲ್ಲಿದ್ದು, ಇದರ ದುರಸ್ತಿ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಬ್ರಹ್ಮಕಲಶೋತ್ಸವ ಸಂದರ್ಭ ವಾಹನಗಳ ನಿಲುಗಡೆ, ವೇದಿಕೆ ನಿರ್ಮಾಣ, ಶುಚಿತ್ವ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮಾ. 26ರಂದು ಬ್ರಹ್ಮಕಲಶೋತ್ಸವ ಆರಂಭಗೊಳ್ಳಲಿದ್ದು, ಇದೇ ದಿನದಂದು ನೂತನ ರಾಜಗೋಪುರದ ಉದ್ಘಾಟನೆ ನಡೆಯುವುದು. ಏ. 5ರಂದು ಮೂಡಪ್ಪ ಸೇವೆ ನಡೆಯುವುದಾಗಿ ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಪ್ರಚಾರಸಮಿತಿ ಅಧ್ಯಕ್ಷ ರಾಜೀವನ್, ಪದಾಧಿಕಾರಿ ನಾರಾಯಣಯ್ಯ, ಆರ್ಥಿಕ ಸಮಿತಿ ಸಂಚಾಲಕ ವಕೀಲ ಅನಂತರಾಮ, ರಂಜಿತ್ ಮನ್ನಿಪ್ಪಾಡಿ ಉಪಸ್ಥಿತರಿದ್ದರು.