ನವದೆಹಲಿ: 9.94 ಲಕ್ಷ ಪ್ರಕರಣಗಳನ್ನು ಪರಿಹರಿಸುವ ಮೂಲಕ ರಾಷ್ಟ್ರೀಯ ಸೈಬರ್ ಕ್ರೈಂ ವರದಿ ಪೋರ್ಟಲ್ ₹3,431 ಕೋಟಿಗೂ ಅಧಿಕ ಹಣವನ್ನು ಉಳಿಸಲು ಸಹಾಯ ಮಾಡಿದೆ ಎಂದು ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ರಾಜ್ಯ ಖಾತೆ ಸಚಿವ ಬಿ.ಎಲ್ ವರ್ಮಾ ಅವರು ಬುಧವಾರ ಸಂಸತ್‌ಗೆ ಮಾಹಿತಿ ನೀಡಿದ್ದಾರೆ.
ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಅವರು ಇದನ್ನು ಹೇಳಿದ್ದಾರೆ. ಅಲ್ಲದೆ ಹಣಕಾಸು ವಂಚನೆಯ ಬಗ್ಗೆ ಪೋರ್ಟಲ್ ಕಾರ್ಯ ನಿರ್ವಹಿಸುವುದರ ಬಗ್ಗೆಯೂ ಅವರು ಬೆಳಕು ಚೆಲ್ಲಿದ್ದಾರೆ.
'Citizen Financial Cyber Fraud Reporting and Management System' ದೂರು ಬಂದ ಕೂಡಲೇ ಮುಂದಿನ ಕ್ರಮಕ್ಕಾಗಿ ಆಯಾ ರಾಜ್ಯ ಮಟ್ಟದ ಕಾನೂನು ಜಾರಿ ಏಜೆನ್ಸಿಗಳಿಗೆ ಸೈಬರ್ ಕ್ರೈಮ್ ಘಟನೆಗಳನ್ನು ಸ್ವಯಂಚಾಲಿತವಾಗಿ ತಲುಪಿಸುತ್ತದೆ ಎಂದು ಹೇಳಿದ್ದಾರೆ.
cybercrime.gov.in ಪೋರ್ಟಲ್, ಹಣಕಾಸು ವಂಚನೆ ಬಗ್ಗೆ ತಕ್ಷಣ ಮಾಹಿತಿ ನೀಡಲು ಸಹಾಯ ಮಾಡುವುದಲ್ಲದೆ, ವಂಚಕರಿಂದ ಹಣ ಕದಿಯುವುದನ್ನು ತಡೆಯುತ್ತದೆ. ಇದರ ಹಾಗೂ ಇದರ ಸಹಾಯವಾಣಿ ಸಂಖ್ಯೆ '1930' ರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವಾಲಯ ಸಲಹೆ ನೀಡಿದೆ.