ನವದೆಹಲಿ: ಮಹದೇವ್ ಆನ್‌ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ಆಯಪ್ ಹಗರಣದಲ್ಲಿ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಹೊಸದಾಗಿ ₹388 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಈ ಪ್ರಕರಣದಲ್ಲಿ 'ಹವಾಲಾ ಆಪರೇಟರ್' ಎನ್ನಲಾದ, ದುಬೈನಲ್ಲಿ ನೆಲಸಿರುವ ಕೋಲ್ಕತ್ತದ ಹರಿಶಂಕರ್ ತಿಬ್ರೇವಾಲ್ ಅವರಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ತಿಬ್ರೇವಾಲ್ ವಿರುದ್ಧ ತನಿಖೆ ನಡೆಸುತ್ತಿರುವ ಇ.ಡಿ, ಈವರೆಗೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಮಂದಿಗೆ ಸೇರಿದ ಸುಮಾರು ₹ 2,295.61 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಂತಾಗಿದೆ.
ತಿಬ್ರೇವಾಲ್‌ಗೆ ಸಂಬಂಧಿಸಿದ ಮಾರಿಷಸ್ ಮೂಲದ ಕಂಪನಿ ಟನೋ ಇನ್ವೆಸ್ಟ್‌ಮೆಂಟ್ ಆಪರ್ಚುನಿಟೀಸ್ ಮೂಲಕ ಛತ್ತೀಸಗಢ, ಮುಂಬೈ ಮತ್ತು ಮಧ್ಯಪ್ರದೇಶದಲ್ಲಿ ಪ್ರವರ್ತಕರ ಹೆಸರಿನಲ್ಲಿ ಅನೇಕ ಬೆಟ್ಟಿಂಗ್ ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ಗಳು, ಪ್ಯಾನಲ್ ಆಪರೇಟರ್‌ಗಳು ಮತ್ತು ಪ್ರವರ್ತಕರ ಸಹವರ್ತಿಗಳ ಹೆಸರಿನಲ್ಲಿ ಹೂಡಿಕೆ ಮಾಡಲಾಗಿದೆ. ಇವುಗಳಿಗೆ ಸಂಬಂಧಿಸಿದ ಚರ ಆಸ್ತಿಗಳು ಸೇರಿ ಒಟ್ಟು ₹387.99 ಕೋಟಿ ಮೌಲ್ಯದ ಆಸ್ತಿಯನ್ನು ಡಿ.5ರಂದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ತಾತ್ಕಾಲಿಕ ಆದೇಶ ಹೊರಡಿಸಿ, ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ತಿಳಿಸಿದೆ.
ಛತ್ತೀಸಗಢದ ಪ್ರಭಾವಿ ರಾಜಕಾರಣಿಗಳು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳು ಈ ಹಗರಣದಲ್ಲಿ ಶಾಮೀಲಾಗಿದ್ದಾರೆ. ಪ್ರಕರಣ ಸಂಬಂಧ 11 ಮಂದಿಯನ್ನು ಬಂಧಿಸಿ, ನಾಲ್ಕು ಆರೋಪಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅದು ಹೇಳಿದೆ.
ಮಹದೇವ್ ಆಯಪ್ ಪ್ರವರ್ತಕರೊಂದಿಗೆ ಪಾಲುದಾರಿಕೆ ಜೊತೆಗೆ, 'ಸ್ಕೈ ಎಕ್ಸ್‌ಚೇಂಜ್' ಎಂಬ ಅಕ್ರಮ ಬೆಟ್ಟಿಂಗ್ ಆಯಪ್ ಮಾಲೀಕತ್ವ ಹೊಂದಿದ್ದ ಹರಿಶಂಕರ್ ತಿಬ್ರೇವಾಲ್, ಇದರ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಇ.ಡಿ ಆರೋಪಿಸಿದೆ. ಮಹದೇವ್ ಆಯಪ್‌ನ ಇಬ್ಬರು ಪ್ರಮುಖ ಪ್ರವರ್ತಕರಾದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಳ್ ಛತ್ತೀಸಗಢದವರು.