ಮಾಸ್ಕೊ: ಕಜಕಿಸ್ತಾನದಲ್ಲಿ ಸಂಭವಿಸಿದ ವಿಮಾನ ದುರಂತ ಸಂದರ್ಭದಲ್ಲಿ ಉಕ್ರೇನ್ ಡ್ರೋನ್ ವಿರುದ್ಧ ರಷ್ಯಾದ ವಾಯುಸೇನೆಯು ಕಾರ್ಯಾಚರಣೆ ನಡೆಸುತ್ತಿತ್ತು. 38 ಜನರ ಸಾವಿಗೆ ಕಾರಣವಾದ ಈ ದುರಂತಕ್ಕೆ ಕ್ಷಮೆ ಕೋರುತ್ತೇನೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಈ ಕುರಿತು ಅಜರ್‌ಬೈಜಾನ್‌ನ ಅಧ್ಯಕ್ಷ ಇಲ್‌ಹ್ಯಾಮ್ ಅಲಿಯೆವ್ ಅವರಿಗೆ ಕರೆ ಮಾಡಿದ ಪುಟಿನ್ ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ.
ದುರಂತಕ್ಕೂ ಮೊದಲು ಅಜರ್‌ಬೈಜಾನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವು ಗ್ರೋಝ್ನಿ ಪ್ರಾಂತ್ಯದ ಬಳಿ ಲ್ಯಾಂಡಿಂಗ್ ನಡೆಸಲು ಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ಉಕ್ರೇನ್‌ನ ಡ್ರೋನ್‌ಗಳು ಹಾಗೂ ರಷ್ಯಾದ ವಾಯು ಸೇನೆ ನಡುವೆ ಯುದ್ಧ ನಡೆಯುತ್ತಿತ್ತು. ಇದರಲ್ಲಿ ಪ್ರಯಾಣಿಕರಿದ್ದ ಈ ವಿಮಾನ ಪತನಗೊಂಡಿತು.
ವಿಮಾನ ಪತನಕ್ಕೆ ಯಾರು ಕಾರಣ ಎಂಬ ವಿಷಯದಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪ ನಡೆಸಿದ್ದವು. ಅಜರ್‌ಬೈಜಾನ್ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಹೊರಗಿನ ದಾಳಿಯಿಂದ ವಿಮಾನ ಪತನಗೊಂಡಿದೆ ಎಂದು ವರದಿಯಾಗಿತ್ತು.
ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಈ ವಿಮಾನ ಪತನಗೊಂಡಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇನ್ನೂ ಕೆಲವು, ಉಕ್ರೇನ್ ನಡೆಸಿದ ದಾಳಿಯಿಂದ ದುರಂತ ಸಂಭವಿಸಿದೆ ಎಂದೆನ್ನಲಾಗಿತ್ತು.
'ಇದೊಂದು ಘೋರ ದುರಂತ' ಎಂದಿರುವ ಪುಟಿನ್ ಅಜರ್‌ಬೈಜಾನ್ ಅಧ್ಯಕ್ಷರ ಕ್ಷಮೆ ಕೋರಿದ್ದಾರೆ.