ಇಟಾನಗರ: ಅರುಣಾಚಲ ಪ್ರದೇಶದ ನಹರ್ಲಗುನ್‌ನಲ್ಲಿ ಇಂದು (ಶನಿವಾರ) ಬೆಳಿಗ್ಗೆ ಓವರ್‌ಹೆಡ್ ಟ್ಯಾಂಕ್ ಕುಸಿದು ಖಾಸಗಿ ಶಾಲೆಯ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇತರೆ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಡೆಲ್ ವಿಲೇಜ್‌ನಲ್ಲಿರುವ ಸೇಂಟ್ ಅಲ್ಫೋನ್ಸಾ ಶಾಲೆಯ ವಿದ್ಯಾರ್ಥಿಗಳು ಆಟವಾಡುತ್ತಿದ್ದಾಗ ಟ್ಯಾಂಕ್ ಕುಸಿದು ಬಿದ್ದಿದೆ ಎಂದು ನಹರ್ಲಾಗುನ್ ಪೊಲೀಸ್ ವರಿಷ್ಠಾಧಿಕಾರಿ ಮಿಹಿನ್ ಗ್ಯಾಂಬೊ ತಿಳಿಸಿದ್ದಾರೆ.
ಗಾಯಗೊಂಡಿರುವ ಮೂವರು ವಿದ್ಯಾರ್ಥಿಗಳನ್ನು ನಹರ್ಲಗುನ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಓದುತ್ತಿದ್ದರು. ಗಾಯಗೊಂಡಿರುವ ವಿದ್ಯಾರ್ಥಿಗಳು 6 ಮತ್ತು 7 ನೇ ತರಗತಿಯಲ್ಲಿ ಓದುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಶಾಲೆಯ ಪ್ರಾಂಶುಪಾಲರು, ಮಾಲೀಕರು ಮತ್ತು ಇತರ ನಾಲ್ವರು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.