ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆದಾಯ ಮೀರಿದ ಆಸ್ತಿ ಸಂಪಾದಿಸಿದ ಆರೋಪದಡಿಯಲ್ಲಿ ಸಾರಿಗೆ ಇಲಾಖೆಯ ಮಾಜಿ ಕಾನ್‌ಸ್ಟೆಬಲ್‌ವೊಬ್ಬರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡಿದ್ದಾರೆ.
ದಾಳಿಯ ವೇಳೆ 40 ಕೆ.ಜಿ ಬೆಳ್ಳಿಯ ಗಟ್ಟಿ ಹಾಗೂ ₹200 ಮೂಖಬೆಲೆ ನೋಟುಗಳ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
ಲೋಕಾಯುಕ್ತ ಪೊಲೀಸರು ಗುರುವಾರವೂ ಮಧ್ಯಪ್ರದೇಶ ಸಾರಿಗೆ ಇಲಾಖೆಯ ಮಾಜಿ ಕಾನ್‌ಸ್ಟೆಬಲ್‌ವೊಬ್ಬರ ಮನೆ ಮೇಲೆ ದಾಳಿ ನಡೆಸಿ ₹2.85 ಕೋಟಿ ನಗದು ಸೇರಿದಂತೆ 3 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದರು.
ನಗದು ಜತೆಗೆ ₹50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಎಸ್‌ಪಿ ತಿಳಿಸಿದ್ದಾರೆ.