ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ 4,002 ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿದ್ದು, 5.59 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
'ಡಿ. 1, 8 ಹಾಗೂ 22ರಂದು ನಡೆಯಲಿರುವ ಲಿಖಿತ ಪರೀಕ್ಷೆಗೆ 5,59,135 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ' ಎಂದು ಜಮ್ಮು- ಕಾಶ್ಮೀರ ಸೇವಾ ಆಯ್ಕೆ ನೇಮಕಾತಿ ಮಂಡಳಿ (ಎಸ್‌ಎಸ್‌ಆರ್‌ಬಿ) ಅಧ್ಯಕ್ಷ ಇಂದು ಕನ್ವಾಲ್ ಚಿಬ್ ಶನಿವಾರ ತಿಳಿಸಿದ್ದಾರೆ.
ಪ್ರತಿಭಟನೆ: ವಯೋಮಿತಿ ಸಡಿಲಿಸಬೇಕು ಹಾಗೂ ಪರೀಕ್ಷಾ ದಿನಗಳನ್ನು ಪುನರ್ ನಿಗದಿಪಡಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ ಯುವಕರ ಗುಂಪೊಂದು ಇಲ್ಲಿ ಪ್ರತಿಭಟನೆ ನಡೆಸಿತು.
'ನಮಗೂ ಪರೀಕ್ಷೆ ಬರೆಯಲು ಸಮಾನ ಅವಕಾಶ ಕಲ್ಪಿಸಿ' ಎಂದು ಪ್ರತಿಭಟನನಿರತ ಯುವಕರು ಘೋಷಣೆಗಳನ್ನು ಹಾಕಿದರು.
'ಪೊಲೀಸ್ ಇಲಾಖೆಗೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂಬುದು ನಮ್ಮ ಕನಸು. ಆದರೆ ಹಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಯೇ ನಡೆದಿಲ್ಲ. ವಯೋಮಿತಿ ಸಡಿಲಿಸಿ ನಮಗೂ ಅವಕಾಶ ಕೊಡಿ ಎಂದು ಎಲ್ಲರಿಗೂ ಮನವಿ ಸಲ್ಲಿಸಿದರೂ, ಪ್ರಯೋಜನವಾಗದಾಗಿದೆ' ಎಂದು ಯುವ ನಾಯಕ, ಸಾಮಾಜಿಕ ಕಾರ್ಯಕರ್ತ ಮೆಹ್ರಾನ್ ಅಂಜುಮ್ ಮಿರ್ ಬೇಸರ ವ್ಯಕ್ತಪಡಿಸಿದರು.
ಸಭೆ: ಮುಖ್ಯ ಕಾರ್ಯದರ್ಶಿ ಅಟಲ್ ಡುಲ್ಲೂ ಪರೀಕ್ಷಾ ಸಿದ್ಧತೆಗಳ ಕುರಿತಂತೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.
ಕಾನ್‌ಸ್ಟೆಬಲ್ (ಕಾರ್ಯನಿರ್ವಾಹಕ/ಸಶಸ್ತ್ರ/ಎಸ್‌ಡಿಆರ್‌ಎಫ್) ಹುದ್ದೆಗಳಿಗೆ 20 ಜಿಲ್ಲೆಗಳ 856 ಕೇಂದ್ರಗಳಲ್ಲಿ ಡಿ. 1ರಂದು ಪರೀಕ್ಷೆ ನಡೆಯಲಿದ್ದು, ಇದಕ್ಕೆ 2,62,863 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಜಮ್ಮು ಜಿಲ್ಲೆಯಿಂದ ಗರಿಷ್ಠ 54,296 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಚಿಬ್ ಮಾಹಿತಿ ನೀಡಿದರು.
ಕಾನ್‌ಸ್ಟೆಬಲ್ (ಟೆಲಿಕಮ್ಯುನಿಕೇಶನ್) ಹುದ್ದೆಗಳಿಗೆ 1,67,609 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಡಿ 8ರಂದು ಪರೀಕ್ಷೆ ನಡೆಯಲಿದೆ. ಡಿ. 22ರಂದು ನಡೆಯಲಿರುವ ಕಾನ್‌ಸ್ಟೆಬಲ್ (ಛಾಯಾಗ್ರಾಹಕ) ಪರೀಕ್ಷೆಯನ್ನು 1,28,663 ಅಭ್ಯರ್ಥಿಗಳು ಬರೆಯಲಿದ್ದಾರೆ ಎಂದು ತಿಳಿಸಿದ್ದಾರೆ.