ನವದೆಹಲಿ: ಸುಪ್ರೀಂ ಕೋರ್ಟ್‌ನ ಅನುಮತಿಯಂತೆ ಭೂಷಣ್ ಸ್ಟೀಲ್ ಮತ್ತು ಪವರ್ ಕಂಪನಿಗೆ ಸೇರಿದ ₹4,025 ಕೋಟಿ ಮೌಲ್ಯದ ಆಸ್ತಿಯನ್ನು ಜೆಎಸ್‌ಡಬ್ಲೂ ಸ್ಟೀಲ್‌ಗೆ ಜಾರಿ ನಿರ್ದೇಶನಾಲಯ ಹಸ್ತಾಂತರಿಸಿದೆ.
ದಿವಾಳಿಯಾದ ಕಂಪನಿಯೊಂದರ ಆಸ್ತಿಯನ್ನು ಖರೀದಿಸಲು ಜೆಎಸ್‌ಡಬ್ಲೂ ಆಸಕ್ತಿ ಹೊಂದಿತ್ತು.
ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯ ನಿಯಮದಡಿ ಭೂಷಣ್ ಸ್ಟೀಲ್‌ನ ಆಸ್ತಿ ಖರೀದಿಗೆ ಜೆಎಸ್‌ಡಬ್ಲೂ ಅರ್ಜಿ ಸಲ್ಲಿಸಿತ್ತು. ಆದರೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಈ ಆಸ್ತಿಯನ್ನು ಮುಟುಗೋಲು ಹಾಕಿಕೊಂಡಿತ್ತು. ಇದರಲ್ಲಿ ಬ್ಯಾಂಕ್ ಸಾಲ ವಂಚನೆ, ಹಣವನ್ನು ಬೇರೆಡೆ ವರ್ಗಾಯಿಸಿದ ಆರೋಪವನ್ನು ಕಂಪನಿ ಎದುರಿಸುತ್ತಿತ್ತು.
ಭೂಷಣ್ ಸ್ಟೀಲ್‌ಗೆ ಸಂಬಂಧಿಸಿದ ಆಸ್ತಿಯನ್ನು ಪಡೆಯಲು ಅವಕಾಶ ನೀಡಬೇಕು ಎಂಬ ಜೆಎಸ್‌ಡಬ್ಲೂ ಕಂಪನಿಯ ಮನವಿಯನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್, ಅದನ್ನು ಹಸ್ತಾಂತರಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿತ್ತು.
ಈ ಹಿಂದೆ ವಜ್ರ ವ್ಯಾಪಾರಿ ನೀರವ್ ಮೋದಿ ಹಾಗೂ ಮೇಹುಲ್ ಚೋಕ್ಸಿ ಬ್ಯಾಂಕ್ ವಂಚನೆ ಪ್ರಕರಣ ಹಾಗೂ ಶಾರದಾ ಪೋಂಜಿ ವಂಚನೆ ಪ್ರಕರಣದಲ್ಲೂ ಅವರ ಆಸ್ತಿ ಖರೀದಿದಾರರಿಗೆ ಅದನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ ತಡವಾಗಿ ಆರಂಭಿಸಿದೆ.