ಗುವಾಹಟಿ : ರಾಜ್ಯದಲ್ಲಿ ಬಾಲ್ಯ ವಿವಾಹದ ವಿರುದ್ಧದ ಮೂರನೇ ಹಂತದ ಕಾರ್ಯಾಚರಣೆಯಲ್ಲಿ 416 ಜನರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಹೇಳಿದ್ದಾರೆ.
ಡಿಸೆಂಬರ್ 21ರ ತಡ ರಾತ್ರಿ ಆರಂಭವಾದ 3ನೇ ಹಂತದ ಕಾರ್ಯಾಚರಣೆಯಲ್ಲಿ 416 ಮಂದಿಯನ್ನು ಬಂಧಿಸಲಾಗಿದ್ದು, 335 ಪ್ರಕರಣಗಳನ್ನು ದಾಖಲಿಸಲಾಗಿದೆ. ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಸಾಮಾಜಿಕ ಅನಿಷ್ಟವನ್ನು ಕೊನೆಗೊಳಿಸಲು ನಾವು ದಿಟ್ಟ ಹೆಜ್ಜೆ ಇಡುತ್ತೇವೆ' ಎಂದು ಮುಖ್ಯಮಂತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಾಲ್ಯ ವಿವಾಹದ ವಿರುದ್ಧ ಸಮರ ಸಾರಿರುವ ಅಸ್ಸಾಂ ಸರ್ಕಾರವು 2023ರಲ್ಲಿ ಫೆಬ್ರುವರಿ ಮತ್ತು ಅಕ್ಟೋಬರ್‌ನಲ್ಲಿ 2 ಹಂತಗಳಲ್ಲಿ ಕಠಿಣ ಕಾರ್ಯಾಚರಣೆಯನ್ನು ಕೈಗೊಂಡಿತ್ತು.
ಫೆಬ್ರುವರಿಯಲ್ಲಿ ನಡೆದ ಮೊದಲ ಹಂತದ ಕಾರ್ಯಾಚರಣೆಯಲ್ಲಿ 3,483 ಜನರನ್ನು ಬಂಧಿಸಲಾಗಿದ್ದು, 4,515 ಪ್ರಕರಣಗಳು ದಾಖಲಾಗಿವೆ. ಅಕ್ಟೋಬರ್‌ನಲ್ಲಿ ನಡೆದ ಎರಡನೇ ಹಂತದ ಕಾರ್ಯಾಚರಣೆಯಲ್ಲಿ 915 ಜನರನ್ನು ಬಂಧಿಸಲಾಗಿದ್ದು, 710 ಪ್ರಕರಣಗಳನ್ನು ದಾಖಲಿಸಲಾಗಿದೆ.